ಸಂವಿಧಾನಕ್ಕೆ ಸಂಘಪರಿವಾರದ ಜೊತೆ ವಿಪಕ್ಷಗಳಿಂದಲೂ ಅಪಾಯ: ಶಿವಸುಂದರ್
‘ಸಂವಿಧಾನ v/s ಸನಾತನವಾದ’ ಪುಸ್ತಕ ಬಿಡುಗಡೆ

ಕಲಬುರಗಿ : ನಮ್ಮ ಸಂವಿಧಾನಕ್ಕೆ ಬಿಜೆಪಿ, ಆರೆಸ್ಸೆಸ್ ಜೊತೆಗೆ ವಿರೋಧ ಪಕ್ಷಗಳಿಂದಲೂ ಬಹಳಷ್ಟು ಅಪಾಯವಿದೆ ಎಂದು ಚಿಂತಕ ಶಿವಸುಂದರ್ ಹೇಳಿದ್ದಾರೆ.
ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದ ಸಮೀಪದಲ್ಲಿರುವ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ)ಯು ಸೋಮವಾರ ಆಯೋಜಿಸಿದ್ದ ‘ಸಂವಿಧಾನ v/s ಸನಾತನವಾದ’ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ‘ಕೋಮುವಾದಿಗಳ ಸಂವಿಧಾನ ವಿರೋಧಿ ನಡೆ’ ಕುರಿತ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
’ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿದಂತೆ ಎಲ್ಲೆಡೆಯೂ ಹಿಂದುತ್ವವಾದಿಯ ಸಿದ್ಧಾಂತಗಳು ಪಸರಿಸುತ್ತಿದೆ. ಸಂವಿಧಾನಪರ ಸ್ಥಾನದಲ್ಲಿರುವ ವಿಪಕ್ಷಗಳು ತಿದ್ದಿ ಹೇಳುವ ಅಥವಾ ತಪ್ಪುಗಳನ್ನು ಹೇಳುವ ನೈತಿಕತೆಯನ್ನು ಕಳೆದುಕೊಂಡಿವೆ. ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣ ಕೋಮುಮಯವಾಗಿದೆ ಎನ್ನುವುದರಲ್ಲಿ ತಪ್ಪಿಲ್ಲ. ಇದಕ್ಕೆ ರಾಮಜನ್ಮಭೂಮಿ, ಬಾಬರಿ ಮಸೀದಿ ಪ್ರಕರಣಗಳ ತೀರ್ಪುಗಳೇ ಸಾಕ್ಷಿ ಎಂದರು.
ಬಿಜೆಪಿ ಮತ್ತು ಆರೆಸ್ಸೆಸ್ ಮೂಲದವರು ಕರ್ನಾಟಕದಲ್ಲಿ ಸಿಟಿಝನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಎಂಬ ಹೊಸ ಸಂಘಟನೆ ಕಟ್ಟಿಕೊಂಡು ‘ಸಂವಿಧಾನ ಸನ್ಮಾನ ಅಭಿಯಾನ’ ಆರಂಭಿಸಿದ್ದಾರೆ. ಈ ಹಿಂದೆ ಅಂಬೇಡ್ಕರ್ ವಾದಿಯಾಗಿ ಸಾವರ್ಕರ್ ಅವರನ್ನು ವಿರೋಧಿಸುತ್ತಿದ್ದ ಎನ್.ಮಹೇಶ್ ಇದೀಗ ಬಿಜೆಪಿ ಪಕ್ಷಕ್ಕೆ ಸೇರಿ ಸಾವರ್ಕರ್ ಆಗಿ ಪರಿವರ್ತನೆಗೊಂಡು ಈ ಅಭಿಯಾನದ ನೇತೃತ್ವ ವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಮ್ಮರ್ಗಾದ ವಿಶ್ವನಾಥ ಕೋರಣೇಶ್ವರ ಸ್ವಾಮಿ ಮಾತನಾಡಿ, ಇತ್ತೀಚೆಗೆ ದೇಶದಲ್ಲಿ ಹಿಂದುತ್ವ ಸಂವಿಧಾನ ನಿರ್ಮಾಣದ ಘೋಷಣೆಗಳು ನಡೆಯುತ್ತಿವೆ. ನಮ್ಮಿಂದ ಆಯ್ಕೆಯಾದ ಸಂಸದರು, ಶಾಸಕರು, ಪರಿಷತ್ ಸದಸ್ಯರು ವಿಧಾನಸಭೆ ಹಾಗೂ ಸಂಸತ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಚಿಂತಕ ಪ್ರೊ.ಆರ್.ಕೆ. ಹುಡಗಿ ಮಾತನಾಡಿ, ಸನಾತನವಾದಿ ಎಂದುಕೊಂಡಿರುವ ಪ್ರಮುಖ ವ್ಯಕ್ತಿಗಳು ತಮ್ಮನ್ನು ಆಗದವರನ್ನು ಮೌನವಾಗಿರಿಸಿ, ಕೊಲೆ ಮಾಡಿಸುತ್ತಾರೆ. ಇಲ್ಲದಿದ್ದರೆ ಅವರನ್ನು ಅಪಮಾನಿಸಿ ನಿರ್ನಾಮ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕರಾದ ಮಲ್ಲಿಕಾರ್ಜುನ ಕ್ರಾಂತಿ, ಅರ್ಜುನ ಭದ್ರೆ, ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ದತ್ತಾತ್ರೇಯ ಇಕ್ಕಳಕಿ, ಸಿಪಿಐ ಮುಖಂಡರಾದ ಮೌಲಾ ಮುಲ್ಲಾ, ಮಹೇಶಕುಮಾರ ರಾಠೋಡ ಮತ್ತಿತರರು ಹಾಜರಿದ್ದರು.
ತುರ್ತು ಪರಿಸ್ಥಿತಿಯಲ್ಲಿ ವಾಜಪೇಯಿಯಿಂದ ಕ್ಷಮಾಪಣಾ ಪತ್ರ :
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಅವರು ಅರ್ಧ ದಿನವೂ ಜೈಲಿನಲ್ಲಿ ಇರದೇ ಕ್ಷಮಾಪಣಾ ಪತ್ರ ಬರೆದು ಮನೆಗೆ ತೆರಳಿದ್ದರು ಎಂದು ಅಂಕಣಕಾರ, ಸಾಮಾಜಿಕ ಚಿಂತಕ ಶಿವಸುಂದರ್ ಹೇಳಿದ್ದಾರೆ.
ಆರೆಸ್ಸೆಸ್‌ನ ಬಾಳಸಾಹೇಬ್ ದೇವರಸ್ ಅವರು ಇಂದಿರಾಗಾಂಧಿ ಅವರಿಗೆ ೩ ಪತ್ರಗಳನ್ನು ಬರೆದಿದ್ದರು. ‘ಸದುದ್ದೇಶದಿಂದ ತುರ್ತು ಪರಿಸ್ಥಿತಿ ತಂದಿದ್ದು ನಮಗೆ ಗೊತ್ತಾಗಿದೆ. ನಮ್ಮನ್ನು ಬಿಡುಗಡೆ ಮಾಡಿ ಎಂದು ಪತ್ರಗಳಲ್ಲಿ ಬರೆದಿದ್ದರು. ಇದೇ ಕಾರಣಕ್ಕಾಗಿಯೇ ಸಂಘ ಪರಿವಾರದವರು ತುರ್ತು ಪರಿಸ್ಥಿತಿಗೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಅವರು ಹೇಳಿದರು.







