ಸಂವಿಧಾನವೇ ದೇಶದ ಪ್ರತಿಯೊಬ್ಬ ನಾಗರಿಕನ ಶ್ರೀರಕ್ಷೆ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಸೇಡಂ : ದೇಶದ ಸಂವಿಧಾನವು ಕೇವಲ ಒಂದು ಪುಸ್ತಕವಲ್ಲ, ಅದು ಈ ನಾಡಿನ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಬದುಕಿನ ಶ್ರೀರಕ್ಷೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ರೈಲು ನಿಲ್ದಾಣದ ಸಮೀಪದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿ ಛಲವಾದಿ ಸಮಾಜದ ವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಅತ್ಯಂತ ದೂರದೃಷ್ಟಿಯಿಂದ ಸಂವಿಧಾನ ರೂಪಿಸಿದ್ದು, ಶೋಷಿತರು ಹಾಗೂ ಸಾಮಾನ್ಯರು ಸಮಾನವಾಗಿ ಬದುಕುವ ವಾತಾವರಣ ನಿರ್ಮಿಸಿದ್ದಾರೆ. ಯಾರೊಬ್ಬರ ಕೈಯಲ್ಲೂ ಅತಿಯಾದ ಅಧಿಕಾರ ಕೇಂದ್ರೀಕೃತವಾಗಬಾರದು ಎಂಬ ಕಾರಣಕ್ಕೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ನಡುವೆ ಸಮತೋಲನ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಹೇಳಿದರು.
ಪಾಶ್ಚಿಮಾತ್ಯ ರಾಷ್ಟ್ರಗಳು ಮಹಿಳೆಯರಿಗೆ ಮತದಾನದ ಹಕ್ಕು ನೀಡಲು ನೂರಾರು ವರ್ಷ ತೆಗೆದುಕೊಂಡವು. ಆದರೆ ಭಾರತದಲ್ಲಿ ಸಂವಿಧಾನ ಜಾರಿಯಾದ ಮೊದಲ ದಿನವೇ ಮಹಿಳೆಯರು, ಕಾರ್ಮಿಕರು ಹಾಗೂ ಬಡವರಿಗೆ ಸಮಾನ ಮತದಾನದ ಹಕ್ಕು ನೀಡುವ ಮೂಲಕ ಅಂಬೇಡ್ಕರ್ ಮಹತ್ವದ ಕ್ರಾಂತಿ ಮಾಡಿದ್ದಾರೆ ಎಂದರು.
ಇಂದಿಗೂ ಕೆಲವು ಶಕ್ತಿಗಳು ಮನುಸ್ಮೃತಿಯನ್ನು ವೈಭವೀಕರಿಸಲು ಪ್ರಯತ್ನಿಸುತ್ತಿವೆ. ಅಂಬೇಡ್ಕರ್ ಹಾಗೂ ಬಸವಣ್ಣನವರ ತತ್ವಗಳನ್ನು ಅನುಸರಿಸುವವರು ಇಂತಹ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು.
ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಮಾತನಾಡಿ, ಸಮಾಜ ಕಟ್ಟುವ ಕಾರ್ಯಕ್ಕೆ ಮಠಾಧೀಶರು ಮುಂದಾಗಬೇಕು. ಸಮಾನತೆಯೇ ಅತಿದೊಡ್ಡ ಕ್ರಾಂತಿ, ಅದನ್ನು ನೀಡಿದ್ದೇ ಅಂಬೇಡ್ಕರ್ ಸಂವಿಧಾನ. ರಾಜಕೀಯ ಪಕ್ಷಗಳು ಸಮಾಜಗಳ ನಡುವೆ ಜಗಳ ಹಚ್ಚದೆ ಸಂವಿಧಾನದ ಹಾದಿಯಲ್ಲಿ ನಡೆಯಬೇಕು ಎಂದರು.
ಯುವಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ಅಂಬೇಡ್ಕರ್ ಕನಸು ನನಸಾಗಲು ಸಾಧ್ಯ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಉರಿಲಿಂಗ ಪೆದ್ದೀಶ್ವರ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಆಶೀರ್ವಚನ ನೀಡಿ, ಜಾತಿಗಳ ನಡುವೆ ವಿಭಜನೆ ಆಗದಂತೆ ಎಲ್ಲರೂ ಒಗ್ಗಟ್ಟಾಗಿರಬೇಕು. ಆಗ ಮಾತ್ರ ಸಂವಿಧಾನ ಉಳಿಯಲು ಸಾಧ್ಯ. ಮತದಾನ ಮಾರಾಟವಾಗಬಾರದು. ಅಂಬೇಡ್ಕರ್ ಆಶಯದಂತೆ ಆಡಳಿತ ನಡೆಸುವವರಿಗೆ ಮಾತ್ರ ಮತ ಚಲಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಸೇಡಂನಲ್ಲಿ ಶೀಘ್ರದಲ್ಲೇ ಅಂಬೇಡ್ಕರ್ ಹೈಟೆಕ್ ಗ್ರಂಥಾಲಯ ನಿರ್ಮಾಣವಾಗಬೇಕು ಎಂಬ ಬೇಡಿಕೆಯನ್ನು ಸಚಿವರು ಈಡೇರಿಸುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಕೇವಲ ಡಿಜೆ ಹಾಕಿ ಕುಣಿದು ಕುಪ್ಪಳಿಸುವುದೇ ಆಚರಣೆ ಅಲ್ಲ. ಅವರು ತೋರಿಸಿದ ಹಾದಿಯಲ್ಲಿ ನಡೆದಾಗ ಮಾತ್ರ ಅವರ ಕನಸು ನನಸಾಗುತ್ತದೆ ಎಂದು ತಿಳಿಸಿದರು.
ಬುದ್ದ ವಿಹಾರ ಅಡದುರ ಬೀದರ್ ಭಂತ್ಯೆ ವರಜ್ಯೋತಿ ವೈಶಾಲಿ, ಚಿತ್ರದುರ್ಗ ಛಲವಾದಿ ಗುರುಪೀಠ ಬಸವನಾಗಿದೇವ ದಿವ್ಯ ಸಾನಿಧ್ಯ ವಹಿಸಿದ್ದರು. ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ, ಸಿಪಿಐ ಮಹಾದೇವ ದಿಡ್ಡಿಮನಿ, ಅಬ್ದುಲ್ ರಶೀದ ರಂಜೋಳ, ಓಂಪ್ರಕಾಶ್ ಪಾಟೀಲ, ಪೌರಾಯುಕ್ತ ಶರಣಯ್ಯಸ್ವಾಮಿ, ಪ್ರಮುಖರಾದ ಶಿವಕುಮಾರ್ ಪಾಟೀಲ್ ತೇಲ್ಕೂರ, ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ತಾಪಂ ಮಾಜಿ ಸದಸ್ಯ ಜೈ ಭೀಮ್ ಊಡಗಿ, ನಗರಸಭೆ ಆಶ್ರಯ ಕಮಿಟಿ ಸದಸ್ಯ ವಿಲಾಸ್ ಗೌತಮ್ ನೀಡಗುಂದಾ, ಬಹುಜನ ಸಮಾಜ ಪಾರ್ಟಿ ತಾಲ್ಲೂಕು ಅಧ್ಯಕ್ಷ ರೇವಣಸಿದ್ದಪ್ಪ ಸಿಂದೆ, ಛಲವಾದಿ ಸಮಾಜ ತಾಲೂಕು ಅಧ್ಯಕ್ಷರು ಶಿವಕುಮಾರ್ ತೋಟ್ನಳ್ಳಿ, ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಗೌತಮ್ ಆರ್ ಹಳ್ಳಿ, ಶರಣಪ್ಪ ತೇಲ್ಕೂರ, ಸುನೀಲ್ ಹಳ್ಳಿ, ಪ್ರಶಾಂತ್ ಸೇಡಂಕರ, ಸಿದ್ದು ಊಡಗಿ, ಅಂಬರೇಶ ಎಮ್ ಗುಡಿ, ಅರುಣ ಮಾಡಬೂಳಕರ್, ಸುಭಾಷ್ ಹಣಮನಹಳ್ಳಿ, ಬಸವರಾಜ ಸಾಗರ, ಲಕ್ಷ್ಮಣ ಮಂತ್ರಿ ಕೋಡ್ಲಾ ಸೇರಿದಂತೆ ಅನೇಕರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಶ್ರೀಶೈಲ ಬಟಗೀರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಣ ರಂಜೋಳಕರ್ ಕಾರ್ಯಕ್ರಮ ನಿರೂಪಿಸಿದರು. ಸಿದ್ದಾರ್ಥ ಚಿಂತಪಳ್ಳಿ ಸ್ವಾಗತಿಸಿದರು. ಸಾಗರ ಹಳ್ಳಿ ವಂದಿಸಿದರು.






