ಅಳಿವಿನಂಚಿನಲ್ಲಿರುವ ಮಸ್ಕಿಯ ಅಶೋಕ ಶಿಲಾಶಾಸನ

ರಾಯಚೂರು: ಜಿಲ್ಲೆಯ ಐತಿಹಾಸಿಕ ಮಸ್ಕಿಯ ಅಶೋಕ ಶಿಲಾಶಾಸನವು ನಿರ್ವಹಣೆಯ ಕೊರತೆ, ಸ್ಥಳೀಯ ಆಡಳಿತದ ನಿರ್ಲಕ್ಷ ಧೋರಣೆಯಿಂದ ಅವಸಾನದತ್ತ ಸಾಗುತ್ತಿದೆ. ಕ್ರಿ.ಪೂ 3ನೇ ಶತಮಾನದ ಮೇಲೆ ಬೆಳಕು ಚೆಲ್ಲಿದಾಗ ಸಾಮ್ರಾಟ ಅಶೋಕ ಧರ್ಮ ಕಲ್ಲು ಬಂಡೆಗಳ ಮೇಲೆ ಬರೆಸಿದ ಕರ್ನಾಟಕದ 10 ಶಾಸನಗಳ ಪೈಕಿ ಮಸ್ಕಿಯದ್ದೂ ಒಂದಾಗಿದೆ.
ಕಲ್ಯಾಣ ಕರ್ನಾಟಕದ ಕೊಪ್ಪಳದಲ್ಲಿ ಎರಡು ಶಾಸನಗಳು ಹಾಗೂ ಮಸ್ಕಿಯ ಏಕ ಶಿಲಾಶಾಸನ ಪ್ರಮುಖವಾಗಿದೆ. ಅಶೋಕನು ಯಾವ ಶಾಸನಗಳಲ್ಲಿಯೂ ತನ್ನ ಹೆಸರನ್ನು ದಾಖಲಿಸದೇ ಕೇವಲ ದೇವನಾಂಪ್ರಿಯ, ಪ್ರಿಯದರ್ಶಿ ಎಂಬ ನಾಮದೊಂದಿಗೆ ಬರೆಸಿದ್ದು, ಮಸ್ಕಿ ಶಾಸನದಲ್ಲಿ ಮೊದಲ ಬಾರಿಗೆ ಅಶೋಕನ ಹೆಸರನ್ನು ‘ದೇವನಾಂಪ್ರಿಯ ಅಶೋಕ’ ಎಂದು ಉಲ್ಲೇಖಿಸಲಾಗಿದೆ.
ಅಶೋಕನ ಶಿಲಾಶಾಸನ ಹೊಂದಿರುವ ಮಸ್ಕಿ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಮಸ್ಕಿಯನ್ನು ಇತಿಹಾಸ ಕಾಲದಲ್ಲಿ ಮಾಸಂಗಿಪುರ, ಮೊಸಂಗಿ ಎಂದು ಗುರುತಿಸಲಾಗಿದೆ. ಕ್ರಿ.ಶ 1915ರಲ್ಲಿ ಇಂಜಿನಿಯರ್ ಆಗಿದ್ದ ಸಿ.ಬಿಡನ್ ಎಂಬವರು ದೇವನಾಂಪ್ರಿಯ ಅಶೋಕ ಶಾಸನ ಗುರುತಿಸಿದ್ದಾರೆ.
ಹಿಂದೆ ಲಿಂಗಸುಗೂರು ತಾಲೂಕಿಗೆ ಒಳಪಟ್ಟಿದ್ದ ಮಸ್ಕಿ ಕೆಲವು ವರ್ಷಗಳ ಹಿಂದೆ ತಾಲೂಕಾಗಿ ರಚನೆಯಾಗಿದೆ. ಮಸ್ಕಿಯ ತಾಲೂಕಿನಲ್ಲಿ ‘ದೇವನಾಂಪ್ರಿಯ ಅಶೋಕ’ ಏಕಶಿಲೆಯ ಕೆಳಗೆ ಇಡಲಾಗಿದೆ. ಇದು ಬ್ರಹ್ಮ ಲಿಪಿಯಲ್ಲಿ ಕೆತ್ತಲಾಗಿದೆ. ಇಲ್ಲಿ ಶಿಲಾಯುಗದ ಅಸ್ತಿಪಂಜರಗಳು, ವೀರಗಲ್ಲುಗಳು, ಸಿಡಿಲು ಗುಂಡುಗಳು ಪತ್ತೆಯಾಗಿವೆ. ಮೂಲಸೌಕರ್ಯದ ಕೊರತೆ: ಪುರಾತನ ಕೋಟೆ, ಶಾಸನಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ರವಾನಿಸುವುದು ಸ್ಥಳೀಯ ಆಡಳಿತ ಹಾಗೂ ಪುರತತ್ವ ಇಲಾಖೆಯ ಜವಾಬ್ದಾರಿ. ಆದರೆ ಮಸ್ಕಿಯ ಶಿಲಾಶಾಸನಕ್ಕೆ ಯಾವುದೇ ರಕ್ಷಣೆ ಇಲ್ಲ. ಈ ಶಾಸನ ಈಗ ಅಳಿವಿನಂಚಿನಲ್ಲಿದೆ, 8 ಸಾಲುಗಳಿದ್ದ ಶಾಸನ ಅಸ್ಪಷ್ಟವಾಗಿದ್ದು, ಕೇವಲ 4 ಸಾಲುಗಳು ಕಾಣುತ್ತಿದೆ. ಕೇಂದ್ರ ಪುರಾತತ್ವ ಇಲಾಖೆ ಒಂದು ಬೋರ್ಡ್ನ ಮೇಲೆ ಶಾಸನದ ಸಾಲುಗಳನ್ನು ಕನ್ನಡದಲ್ಲಿ ಅನುವಾದಿಸಿ ಜಾಲಿ ಹಾಕಿ ಇಟ್ಟಿದ್ದನ್ನು ಹೊರತುಪಡಿಸಿ ಬೇರೆ ಏನು ಮಾಡಿಲ್ಲ.
ಶಿಲಾಶಾಸನ ಬಳಿ ಹಗಲಿನಲ್ಲಿ ಒಬ್ಬ ಸಿಬ್ಬಂದಿ ನೇಮಿಸಿದ್ದಾರೆ. ಆದರೆ ರಾತ್ರಿಯಾದರೆ ಕುಡುಕರ ಅಡ್ಡೆಯಾಗುತ್ತದೆ. ಶಾಸನದ ಅಭಿವೃದ್ಧಿಗೆ ಈ ಹಿಂದೆ ಬಿಜೆಪಿಯ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ ಅವರ ಅವಧಿಯಲ್ಲಿ 10 ಕೋಟಿ ರೂ. ಬಿಡುಗಡೆಯಾಗಿತ್ತು. ಶಾಸನದ ಬಳಿ ಉದ್ಯಾನವನ, ಸ್ವಿಮ್ಮಿಂಗ್ಪೂಲ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರೂ ವರ್ಷಗಳೇ ಉರುಳಿದರೂ ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ. ಅಶೋಕನ ಶಾಸನದ ಬಗ್ಗೆ ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಓದಿ ಬೇರೆ ಜಿಲ್ಲೆಗಳಿಂದ ನೋಡಲು ಮಸ್ಕಿಗೆ ಆಗಮಿಸುವ ಜನರಿಗೆ ಕುಡಿಯುವ ನೀರು, ತಿನ್ನಲೂ ಊಟ ತಿಂಡಿ ಸಹಿತ ಕನಿಷ್ಠ ಸೌಲಭ್ಯವಿಲ್ಲದೇ ಇಲ್ಲಿನ ಅವ್ಯವಸ್ಥೆ ಕಂಡು ನಿರಾಸೆಯಿಂದಲೇ ಹೋಗಬೇಕಿದೆ. ಇಂತಹ ಐತಿಹಾಸಿಕ ಮಹತ್ವ ಇರುವ ಮಸ್ಕಿಯ ಹೆಸರು ರಾಜ್ಯದ ಅನೇಕರಿಗೆ ತಿಳಿದಿಲ್ಲ ಇದಕ್ಕೆ ಸ್ಥಳೀಯ ಆಡಳಿತದ ನಿಷ್ಕಾಳಜಿ, ಪ್ರಚಾರದ ಕೊರತೆಯೇ ಕಾರಣ.
ಮಸ್ಕಿಯ ಅಶೋಕನ ಶಿಲಾಶಾಸನವಾಗಲಿ, ರಾಯಚೂರು ಕೋಟೆ, ಜಲದುರ್ಗ ಕೋಟೆ, ಮುದಗಲ್ ಕೋಟೆ ಯಾವುದೇ ಸ್ಥಳವನ್ನು ರಕ್ಷಣೆ ಮಾಡಲು ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಇತಿಹಾಸಕಾರರ ಆರೋಪ.
ಇದಕ್ಕೆ ಸಾಕ್ಷಿ ಎಂಬಂತೆ ಮಸ್ಕಿಯ ದೇವನಾಂಪ್ರಿಯ ಅಶೋಕ ಶಾಸನ ರಕ್ಷಣೆಗೆ ಮುಂದಾಗುತ್ತಿಲ್ಲ. ಶಿಲಾಶಾಸನಕ್ಕೆ ಕೇವಲ ಒಂದು ಚಿಕ್ಕ ಜಾಲಿ ಗೇಟ್ ಹಾಕಿದ್ದನ್ನು ಹೊರತುಪಡಿಸಿ ಮತ್ತೇನನ್ನೂ ಮಾಡಿಲ್ಲ, ಮಸ್ಕಿಯ ಹಳೆಯ ಬಸ್ ನಿಲ್ದಾಣದ ಬಳಿ ಈ ಶಾಸನದ ಬಗ್ಗೆ ಇರುವ ಮಾಹಿತಿಯ ದೊಡ್ಡ ಫಲಕವನ್ನೂ ಖಾಸಗಿ ವ್ಯಕ್ತಿಗಳು ತೆಗೆದಿದ್ದಾರೆ. ಹೊರ ಜಿಲ್ಲೆಗಳಿಂದ ಆಗಮಿಸುವ ಜನರಿಗೆ ಅಶೋಕನ ಶಿಲಾಶಾಸನ ಎಲ್ಲಿದೆ ಎಂದು ಅನೇಕರಿಗೆ ಕೇಳಿ ಹೋಗಬೇಕಾದ ಪರಿಸ್ಥಿತಿ ಇದೆ.
ಮಸ್ಕಿಗೆ ಕಾಲಿಡುತ್ತಿದ್ದಂತೆ ಐತಿಹಾಸಿಕ ಅಶೋಕನ ಶಿಲಾಶಾಸನ ಹೋಗುವ ದಾರಿ, ಶಾಸನದ ಮಹತ್ವ ಹಾಗೂ ವಿವರಣೆ ನೀಡುವ ಕನಿಷ್ಠ ಒಂದು ಫಲಕವು ಹಾಕಲು ಸ್ಥಳೀಯ ಆಡಳಿತ ತಯಾರಿಲ್ಲ, ಬೇರೆ ರಾಜ್ಯಗಳಲ್ಲಿ ಐತಿಹಾಸಿಕ ಕುರುಹುಗಳನ್ನು, ಕೋಟೆ, ಸ್ಮಾರಕಗಳನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಾರೆ. ನಮ್ಮಲ್ಲಿ ಇಂತಹ ಕಾಳಜಿ ಆಳುವ ನಾಯಕರಿಗೆ, ಅಧಿಕಾರಿ ವರ್ಗದವರಿಗೆ ಯಾಕಿಲ್ಲ ಎಂದು ಸಂಶೋಧಕ ಹಾಗೂ ನಿವೃತ್ತ ಪ್ರಾಚಾರ್ಯ ಚನ್ನಬಸವ ಹಿರೇಮಠ ಪ್ರಶ್ನಿಸುತ್ತಾರೆ.
ಮಸ್ಕಿಯಲ್ಲಿ 4 ಸಾವಿರ ವರ್ಷಗಳ ಹಿಂದೆ ಜನವಸತಿ ಇತ್ತು ಎಂದು ಹೇಳಲಾಗುತ್ತಿದೆ. ಅಮೆರಿಕದ ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಆ್ಯಂಡ್ರಿಮ್ ಎಂ.ಬವೆರ್, ಕೆನಡಾದ ಮ್ಯಾಕ್ ಗಿಲ್ ವಿವಿಯ ಪೀಟರ್ ಜಿ.ಜೋಹಾನ್ಸನ್ ಹಾಗೂ ದಿಲ್ಲಿಯ ನೋಯ್ಡಾ ವಿಶ್ವವಿದ್ಯಾನಿಲಯದ ಹೇಮಂತ್ ಕಡಾಂಬಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ತಂಡ ಉತ್ಖನನ ಮಾಡಿ ಅನೇಕ ಕುರುಹುಗಳನ್ನು ಪತ್ತೆ ಹಚ್ಚಿ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಪಳೆಯುಳಿಕೆಗಳನ್ನು ಸಂಗ್ರಹಿಸಿ ಹೋಗಿದ್ದಾರೆ.
ಅಶೋಕ ಶಿಲಾಶಾಸನ ಬಳಿ ತಂಗುದಾಣ ನಿರ್ಮಿಸಿ ತಡೆಗೋಡೆ ನಿರ್ಮಿಸಬೇಕು. ಮಸ್ಕಿಯ ಶಾಸನ, ವೀರಗಲ್ಲುಗಳು ಒಂದೆಡೆ ಇಟ್ಟು ಸ್ಮಾರಕ ಮಾಡಿ ಸೂಕ್ತ ಭದ್ರತೆ ಒದಗಿಸಬೇಕು. ಕೇಂದ್ರ ಪುರಾತತ್ವ ಇಲಾಖೆ ತಾತ್ಸಾರ ಮನೋಭಾವ ಬಿಡಬೇಕು.
-ಸುರೇಶ ಬಳಗನೂರು, ಇತಿಹಾಸಕಾರ, ಸಂಶೋಧಕ







