ರೋಗಿಯ ಆಶೀರ್ವಾದವೇ ವೈದ್ಯನಿಗೆ ಸಿಗುವ ದೊಡ್ಡ ಪ್ರತಿಫಲ : ಸಚಿವ ಡಾ.ಶರಣಪ್ರಕಾಶ ಪಾಟೀಲ್

ಕಲಬುರಗಿ: ವೈದ್ಯರು ಕೇವಲ ವಿಷಯ ಜ್ಞಾನ ಹೊಂದಿದ್ದರೆ ಸಾಕಾಗುವುದಿಲ್ಲ. ರೋಗಿಗಳೊಂದಿಗೆ ಮಾನವೀಯತೆ, ಕಾಳಜಿ ಹಾಗೂ ಉತ್ತಮ ಸಂವಹನ ಕೌಶಲವನ್ನು ಬೆಳೆಸಿಕೊಳ್ಳಬೇಕು. ಹಣಕ್ಕಿಂತಲೂ ರೋಗಿ ಗುಣಮುಖನಾಗಿ ನೀಡುವ ಆಶೀರ್ವಾದವೇ ವೈದ್ಯನಿಗೆ ಸಿಗುವ ಅತ್ಯಂತ ದೊಡ್ಡ ಪ್ರತಿಫಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ)ಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ (ಎಂಆರ್‌ಎಂಸಿ) ಸ್ಯಾಕ್ ಬಿಲ್ಡಿಂಗ್‌ನಲ್ಲಿ ಶನಿವಾರ ನಡೆದ ‘ಉತ್ಕರ್ಷ–2020’ ಬ್ಯಾಚ್‌ನ ವಿದ್ಯಾರ್ಥಿಗಳ ಪದವಿ ಪ್ರದಾನ ಹಾಗೂ ಶಪಥಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ವೈದ್ಯರಿಗೆ ದೇವರ ಸ್ಥಾನ ನೀಡಲಾಗುತ್ತದೆ. ಆ ಗೌರವಕ್ಕೆ ಧಕ್ಕೆ ಬಾರದಂತೆ ಪ್ರತಿಯೊಬ್ಬ ವೈದ್ಯರೂ ನೈತಿಕತೆ, ಸೇವಾ ಮನೋಭಾವ ಹಾಗೂ ವೃತ್ತಿಪರ ಬದ್ಧತೆಯನ್ನು ಜೀವನದುದ್ದಕ್ಕೂ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ರಾಜ್ಯ ಸರ್ಕಾರ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಲಾಗುತ್ತಿದೆ. ಕಲಬುರಗಿಯಲ್ಲಿ ಪ್ರತ್ಯೇಕ ಕ್ಯಾನ್ಸರ್ ಆಸ್ಪತ್ರೆ, ಮಕ್ಕಳ ಆಸ್ಪತ್ರೆ ಸೇರಿದಂತೆ ಹಲವು ಸುಧಾರಿತ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಂಕನೂರ ಮಾತನಾಡಿ, ದೇಶದಲ್ಲಿ ರೋಗಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇವಲ ಹೆಚ್ಚಿನ ಸಂಖ್ಯೆಯ ವೈದ್ಯರಿಗಿಂತ ನೈತಿಕ ಮೌಲ್ಯಗಳು ಮತ್ತು ಸೇವಾ ಮನೋಭಾವ ಹೊಂದಿರುವ ವೈದ್ಯರ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದರು.
ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಎಚ್‌ಕೆಇ ಸಂಸ್ಥೆಯ ಕೊಡುಗೆ ಮಹತ್ವದ್ದಾಗಿದ್ದು, ಸಮಾಜಮುಖಿ ವೈದ್ಯರನ್ನು ರೂಪಿಸುವಲ್ಲಿ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪದವಿ ಪಡೆದ ವೈದ್ಯರಿಗೆ ‘ಚರಕ ಶಪಥ’ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಎಚ್‌ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ ಎಂ. ಪಾಟೀಲ್, ಡಾ. ರಜನೀಶ ವಾಲಿ, ಡಾ. ಮಹಾದೇವಪ್ಪ ರಾಂಪುರೆ, ಡಾ. ಶರಣಬಸಪ್ಪ ಹರವಾಳ, ಸಾಯಿನಾಥ ಪಾಟೀಲ್, ಅನೀಲಕುಮಾರ ಮರಗೋಳ, ಡಾ. ಕಿರಣ ದೇಶಮುಖ, ನಾಗಣ್ಣ ಮಂಟಿ, ನಿಶಾಂತ ಏಲಿ ಹಾಗೂ ಉಪ ಡೀನ್ ಡಾ. ವಿಜಯಕುಮಾರ ಉಪಸ್ಥಿತರಿದ್ದರು. ಕಾಲೇಜಿನ ಡೀನ್ ಡಾ. ಶರಣಗೌಡ ಪಾಟೀಲ್ ಪಾಳಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಸವಾಂಬಿಕಾ, ಡಾ. ರೋಹಿಣಿ ಪಾಟೀಲ್, ಅನುಶ್ರೀ ಬಿರಾದಾರ, ಡಾ. ಆರ್ಯನ್ ಕಬಾಡೆ ಹಾಗೂ ಡಾ. ತೇಜಸ್ ಕಾರ್ಯಕ್ರಮ ನಿರೂಪಿಸಿದರು.
146 ವೈದ್ಯಕೀಯ ಪದವೀಧರರಿಗೆ ಪದವಿ ಪ್ರದಾನ; ಸಾಧಕರಿಗೆ ಸನ್ಮಾನ
ಸಮಾರಂಭದಲ್ಲಿ 146 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪದವಿ ಪ್ರದಾನ ಮಾಡಲಾಯಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದ 12 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ಟಾಪರ್‌ಗಳಾದ ಮೆರಾಜ್ ತಹರೀನ್ (ಪ್ರಥಮ), ವೈಷ್ಣವಿ ಶಿವಮೂರ್ತಿ (ದ್ವಿತೀಯ), ಎಸ್. ಚೈತನ್ಯ ಲಹರಿ (ತೃತೀಯ) ಹಾಗೂ ಸಾತ್ವಿಕ್ ಯಲಶೆಟ್ಟಿ ಅವರನ್ನು ಗೌರವಿಸಲಾಯಿತು. ಇಎನ್‌ಟಿ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ಅಮ್ರೀನ್ ನಾಜ್ ಅವರಿಗೂ ವಿಶೇಷ ಸನ್ಮಾನ ಮಾಡಲಾಯಿತು.
ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ವೈದ್ಯರು ವೃತ್ತಿಪರ ನೈಪುಣ್ಯದ ಜೊತೆಗೆ ಮಾನವೀಯತೆ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದ ನಂಬಿಕೆಗೆ ಪಾತ್ರರಾಗುತ್ತಾರೆ. ಎಚ್‌ಕೆಇ ಸಂಸ್ಥೆಯು ಕಲ್ಯಾಣ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಐತಿಹಾಸಿಕ ಕೊಡುಗೆ ನೀಡಿದೆ.
-ಡಾ. ಶರಣಪ್ರಕಾಶ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ






