ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹುದ್ದೆ ಖಾಲಿ ಇಲ್ಲ: ಸಚಿವ ಈಶ್ವರ್ ಖಂಡ್ರೆ

ಕಲಬುರಗಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ಖಾಲಿ ಇಲ್ಲ, ನನಗೆ ಯಾವ ಜವಾಬ್ದಾರಿ ಕೊಟ್ಟಿದ್ದಾರೆ ಅದನ್ನು ನಾನು ಪ್ರಮಾಣಿಕತೆಯಿಂದ ನಿಭಾಯಿಸುತ್ತಿದ್ದೇನೆ ಎಂದು ರಾಜ್ಯದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೇಸರು ಕೇಳಿ ಬರುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಕಲಬುರಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಹುದ್ದೆ ಖಾಲಿ ಇಲ್ಲ ಎಂದು ಹೇಳಿದರು.
ಮಹದಾಯಿ ಯೋಜನೆ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಮಹದಾಯಿ ಯೋಜನೆಯ ಕುಡಿಯುವ ನೀರಿನ ಬಳಕೆ ಕುರಿತಾಗಿ ಈಗಾಗಲೇ ಪ್ರಸ್ತಾವನೆ ನೀಡಿದ್ದೇವೆ, ಈ ಯೋಜನೆ ತಡೆಯುವ ಕೆಲಸ ಆಗಬಾರದು, ಇದರ ಕುರಿತು ಯೋಜನೆ ರೂಪಿಸಿದ್ದೇವೆ. ಅರಣ್ಯ ಇಲಾಖೆಯಿಂದ ಏನೆಲ್ಲ ನಿರ್ಧಾರ ಕೈಗೊಳ್ಳಬೇಕು ಎನ್ನುವುದನ್ನು ತೀರ್ಮಾನಿಸಲಾಗಿದೆ. ಇದು ಅಭಿವೃದ್ಧಿಯ ಯೋಜನೆ. ಇದರ ಬಗ್ಗೆ ಸರ್ಕಾರ ಮತ್ತಷ್ಟು ಚರ್ಚೆ ನಡೆಸಲಿದೆ. ಕೇವಲ ಗೋವಾ ರಾಜ್ಯದ ಬಗ್ಗೆ ಆಸಕ್ತಿ ವಹಿಸದೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸಮಾನತೆಯಿಂದ ನೋಡಬೇಕಾಗುತ್ತದೆ ಎಂದರು.
ಬಿಜೆಪಿ ಸಿದ್ದರಾಮಯ್ಯನವರ ಕ್ಷಮೆ ಕೇಳಲಿ:
ಮುಡಾ ಹಗರಣ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯು ಈಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವದ ದುರ್ಬಳಕೆ ಮಾಡುತ್ತಿದೆ. ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರ ಕೈವಾಡವಿಲ್ಲ ಎನ್ನುವುದು ಸಾಬೀತಾಗಿದೆ. ಸುಖಾ ಸುಮ್ಮನೆ ಸಿಎಂ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿಯವರು ಸಿದ್ದರಾಮಯ್ಯನವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.







