ಕಲಬುರಗಿಯಿಂದ ಕಾಳಗಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಜಲಾವೃತ : ಸಂಚಾರ ಸ್ಥಗಿತ

ಕಲಬುರಗಿ: ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಬೆಣ್ಣೆತೋರಾ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಒಳಹರಿವು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಕಲಬುರಗಿಯಿಂದ ಕಾಳಗಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಕಣಸೂರ ಗ್ರಾಮದ ಬಳಿ ಇರುವ ರಾಜ್ಯ ಹೆದ್ದಾರಿ ಜಲಾವೃತಗೊಂಡಿದ್ದು, ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಧಾರಾಕಾರ ಮಳೆಯಿಂದಾಗಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಪರಿಣಾಮವಾಗಿ ರಾಜ್ಯ ಹೆದ್ದಾರಿಯ ಸಂಚಾರ ಮಾತ್ರವಲ್ಲದೆ ಕಣಸೂರ ಗ್ರಾಮವೂ ಜಲಾವೃತಗೊಂಡಿದೆ.
ಸದ್ಯಕ್ಕೆ ಒಳಹರಿವು 43,000 ಕ್ಯೂಸೆಕ್ ಇದ್ದರೆ, ಹೊರಹರಿವು 46,000 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ನದಿಪಾತ್ರದಲ್ಲಿರುವ ಸಾರ್ವಜನಿಕರು ಮತ್ತು ಸುತ್ತಮುತ್ತಲಿನ ಪ್ರದೇಶದವರು ನದಿಯ ಸಮೀಪಕ್ಕೆ ಹೋಗಬಾರದು, ಜಾನುವಾರುಗಳನ್ನು ಸಹ ಬಿಡಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸ್ಥಳದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದು, ಕಾಳಗಿ ಹಾಗೂ ಚಿಂಚೋಳಿ ಕಡೆ ಹೋಗುವವರು ಪರ್ಯಾಯ ಮಾರ್ಗವಾಗಿ ಸೇಡಂ ರಸ್ತೆಯನ್ನು ಬಳಸುವಂತೆ ತಿಳಿಸಲಾಗಿದೆ.





