ರಸಗೊಬ್ಬರದ ಅಭಾವವಿಲ್ಲ, ರೈತರು ಅತಂಕ ಪಡಬೇಕಿಲ್ಲ: ಕಲಬುರಗಿ ಡಿಸಿ ಫೌಝಿಯಾ ತರನ್ನುಮ್

ಕಲಬುರಗಿ: ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ನಡೆದಿರುವುದರಿಂದ ರೈತಾಪಿ ವರ್ಗಕ್ಕೆ ಬೇಕಾಗುವಷ್ಟು ರಸಗೊಬ್ಬರ ಪೂರೈಕೆಗೆ ದಾಸ್ತಾನು ಇದ್ದು, ಯಾವುದೇ ಅಭಾವವಿಲ್ಲ. ಜಿಲ್ಲೆಯ ರೈತರು ಅನಗತ್ಯ ಭಯ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಅವರು ಜೇವರ್ಗಿ ತಾಲೂಕಾ ಪ್ರವಾಸ ಕೈಗೊಂಡಿದ್ದು, ಜೇವರ್ಗಿ ಪಟ್ಟಣ ಮತ್ತು ಕೆಲ್ಲೂರ ಗ್ರಾಮದಲ್ಲಿ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದರು.
ರಸಗೊಬ್ಬರ ಅಂಗಡಿಗಳು ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು, ಗುಣಮಟ್ಟದ ಗೊಬ್ಬರ ಸರಬರಾಜು ಮಾಡಬೇಕೆಂದು ಅಂಗಡಿ ಮಾಲೀಕರಿಗೆ ಸೂಚಿಸಿದರು. ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಜೊತೆಯಲ್ಲಿದ್ದರು.
ಇದಕ್ಕು ಮುನ್ನ ಜೇವರ್ಗಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಆನೆಕಾಲು ರೋಗ ಸಂಶೋಧನೆಗೆ ತೆರೆಯಲಾದ ನೂತನ ಘಟಕವನ್ನು ವೀಕ್ಷಿಸಿದರು. ನಂತರ ಪಟ್ಟಣದ ಪಿ.ಯು.ಕಾಲೇಜಿನಲ್ಲಿ "ಸ್ಫೂರ್ತಿ ಕಿರಣ" ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಡಿಗ್ರಿ ಕಾಲೇಜಿನ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಹಾಸ್ಟೆಲ್ ಕಾಮಗಾರಿ ವೀಕ್ಷಿಸಿದರು.
ತಾಲೂಕಿನ ಚಿಗರಳ್ಳಿನ ಕ್ರಾಸ್ ನಲ್ಲಿರುವ ಜಿಲ್ಲಾ ಮರಳು ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ವೀಕ್ಷಿಸಿದರು. ಇಲ್ಲಿಯೆ ಅರಣ್ಯ ಇಲಾಖೆಯಿಂದ ಹೊಸದಾಗಿ ಸ್ಥಾಪಿಸಲಾಗಿರುವ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ಗೆ ಭೇಟಿ ನೀಡಿ ಗಿಡ ನೆಟ್ಟರು.
ಆಂದೋಲಾ ನಾಡಾ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಂತಿಮವಾಗಿ ಜೇವರ್ಗಿ ತಹಶೀಲ್ದಾರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ತಾಲೂಕಿನ ಪ್ರಗತಿಗೆ ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದಲ್ಲದೆ ರಸಗೊಬ್ಬರ ಅಂಗಡಿಗಳಿಗೆ ಕಂದಾಯ ಅಧಿಕಾರಿಗಳು ಆಗಾಗ ಭೇಟಿ ನೀಡಿ ತಪಾಸಣೆ ಮಾಡಬೇಕು. ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಡಿಜಿಟಲೀಕರಣ ಕಾರ್ಯ ಬೇಗ ಮುಗಿಸಬೇಕೆಂದು ಸೂಚಿಸಿದರು.
ತಹಶೀಲ್ದಾರ ಮಲ್ಲಣ್ಣ ಯಲಗೊಂಡ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.







