ಜೇವರ್ಗಿಯ ಎರಡು ಬಡಾವಣೆಗಳಲ್ಲಿ ಕಳ್ಳರ ಹಾವಳಿ: ಪೊಲೀಸ್ ಭದ್ರತೆಗೆ ಆಗ್ರಹ

ಜೇವರ್ಗಿ: ಪಟ್ಟಣದ ತಾರಾನಗರ ಹಾಗೂ ಮಹಾಲಕ್ಷ್ಮಿ ಬಡಾವಣೆಗಳಲ್ಲಿ ಕಳೆದ ಎರಡು ತಿಂಗಳಿಂದ ಕಳ್ಳರ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರಲ್ಲಿ ತೀವ್ರ ಭಯ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸರಣಿ ಕಳ್ಳತನ ಹಾಗೂ ಕಳ್ಳತನದ ವಿಫಲ ಯತ್ನಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಎರಡೂ ಬಡಾವಣೆಗಳ ನಿವಾಸಿಗಳು ಜೇವರ್ಗಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಅಧಿಕಾರಿಗಳಿಗೆ ಜಂಟಿ ಮನವಿ ಸಲ್ಲಿಸಿದರು.
ಕೇವಲ ರಾತ್ರಿ ವೇಳೆಯಲ್ಲದೆ, ಜನಸಾಮಾನ್ಯರು ಓಡಾಡುವ ಹಗಲು ಹೊತ್ತಿನಲ್ಲಿಯೂ ಸರಣಿ ಕಳ್ಳತನ ಹಾಗೂ ಕಳ್ಳತನದ ವಿಫಲ ಯತ್ನಗಳು ನಡೆಯುತ್ತಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು 10ರಿಂದ 12 ಬಾರಿ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಸ್ಥಳೀಯ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಳ್ಳರ ಹಾವಳಿಯಿಂದಾಗಿ ಬಡಾವಣೆಯ ಸಾರ್ವಜನಿಕರು, ವ್ಯಾಪಾರಿಗಳು, ಉದ್ಯೋಗಿಗಳು ಹಾಗೂ ಮಹಿಳೆಯರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗೆ ಬೀಗ ಹಾಕಿ ಹೊರಗೆ ಹೋಗಲೂ ಜನರು ಆತಂಕಪಡುವಂತಾಗಿದೆ. ಹೀಗಾಗಿ ಬಡಾವಣೆಗಳಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸುವುದು ಅಗತ್ಯವಾಗಿದೆ ಎಂದು ನಿವಾಸಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಬಡಾವಣೆಗಳ ಭದ್ರತೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ತಕ್ಷಣವೇ ‘ಡೈರಿ ಪಾಯಿಂಟ್’ ಸ್ಥಾಪಿಸಬೇಕು. ರಾತ್ರಿ ವೇಳೆಯಲ್ಲಿ ಯಾವುದೇ ಲೋಪವಾಗದಂತೆ ನಿರಂತರ ಪೊಲೀಸ್ ಗಸ್ತು ಹೆಚ್ಚಿಸಬೇಕು. ಸಂಚಾರಿ ಬಿಟ್ ಪುಸ್ತಕ ನಿರ್ವಹಿಸುವುದರ ಜೊತೆಗೆ ಪೊಲೀಸ್ ಅಧಿಕಾರಿಗಳು ಆಗಾಗ್ಗೆ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖ ವಕೀಲರಾದ ಮಲ್ಲಿಕಾರ್ಜುನ ಸೂಗೂರು, ಅಣವೀರ ಗದ್ದಗಿ, ಶಿಕ್ಷಕರಾದ ಶಿವಲಿಂಗಪ್ಪ, ಸಿದ್ದು ಪೂಜಾರಿ, ವೀರೇಶ ಹಳ್ಳಿ, ಅನಿಲ್ ಯಾಳವಾರ್, ಸಿದ್ದು ಯಾಳವಾರ್, ಈರಣ್ಣ ನರಬೋಳಿ, ಸಕ್ರಪ್ಪ ಪೂಜಾರಿ, ವೀರೇಶ ಹಿರೇಮಠ, ನಾಗರಾಜ ವಿ.ಟಿ., ರಾಜು ಮುದ್ದಡಗಿ ಸೇರಿದಂತೆ ತಾರಾನಗರ ಹಾಗೂ ಮಹಾಲಕ್ಷ್ಮಿ ಬಡಾವಣೆಯ ಹಲವಾರು ಪ್ರಮುಖ ನಾಗರಿಕರು ಉಪಸ್ಥಿತರಿದ್ದರು.






