ವಿಧಾನ ಪರಿಷತ್ ಚುನಾವಣೆ; ತಿಪ್ಪಣ್ಣಪ್ಪ ಕಮಕನೂರ ಕಾಂಗ್ರೆಸ್ ಅಭ್ಯರ್ಥಿ

ತಿಪ್ಪಣ್ಣಪ್ಪ ಕಮಕನೂರ
ಬೆಂಗಳೂರು : ಕೋಲಿ ಸಮುದಾಯದ ಪ್ರಭಾವಿ ಮುಖಂಡ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ತಿಪ್ಪಣ್ಣಪ್ಪ ಕಮಕನೂರ ಅವರನ್ನು ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯಲಿರುವ ದೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಪ್ರಕಟಿಸಲಾಗಿದೆ.
1952ರ ಜೂ.6ರಂದು ಚಿತ್ತಾಪುರ ತಾಲೂಕಿನ ಕಮಕನೂರ ಗ್ರಾಮದಲ್ಲಿ ಜನಿಸಿದ ತಿಪ್ಪಣ್ಣಪ್ಪ ಕಮಕನೂರ ಅವರು ಐದು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. 1973-76ರ ಅವಧಿಯಲ್ಲಿ ಚಿತ್ತಾಪುರ ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಅವರು, ಬಳಿಕ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಜನಸೇವೆ ಮಾಡಿದ್ದಾರೆ.
10 ವರ್ಷಗಳ ಕಾಲ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ, 12 ವರ್ಷಗಳ ಕಾಲ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅವರು, 2000-2005ರವರೆಗೆ ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಕೆಪಿಸಿಸಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕೋಲಿ ಸಮುದಾಯದ ಪ್ರಮುಖ ನಾಯಕರೆಂದು ಗುರುತಿಸಿಕೊಂಡಿರುವ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಕಾಂಗ್ರೆಸ್ ಪಕ್ಷ ಈ ಹಿಂದೆ ಎರಡು ಬಾರಿ ವಿಧಾನ ಪರಿಷತ್ ಸದಸ್ಯತ್ವ ನೀಡಿತ್ತು. ಇದೀಗ ಎರಡನೇ ಅವಧಿ ಪೂರ್ಣಗೊಂಡ ನಂತರವೂ ಅವರ ಅನುಭವ, ಪಕ್ಷ ನಿಷ್ಠೆ ಹಾಗೂ ಸಂಘಟನಾ ಸಾಮರ್ಥ್ಯವನ್ನು ಪರಿಗಣಿಸಿ ಹೈಕಮಾಂಡ್ ಮೂರನೇ ಬಾರಿಗೆ ವಿಧಾನ ಪರಿಷತ್ಗೆ ಅಭ್ಯರ್ಥಿಯನ್ನಾಗಿ ಮಾಡಿದೆ.






