ನ.20ರಂದು ಕಲಬುರಗಿಯಲ್ಲಿ ‘ಟಿಪ್ಪು ಉತ್ಸವ’ : ಹನುಮಂತ ಯಳಸಂಗಿ

ಕಲಬುರಗಿ: ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ 276ನೇ ಜನ್ಮದಿನದ ಅಂಗವಾಗಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟದ ವತಿಯಿಂದ ನವೆಂಬರ್ 20ರಂದು ಮಧ್ಯಾಹ್ನ 3 ಗಂಟೆಗೆ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ‘ಟಿಪ್ಪು ಉತ್ಸವ’ ಆಯೋಜಿಸಲಾಗಿದೆ ಎಂದು ಒಕ್ಕೂಟದ ಸಂಚಾಲಕ ಹನುಮಂತ ಜಿ. ಯಳಸಂಗಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಟಿಪ್ಪು ಸುಲ್ತಾನ್ ಅವರ ವಂಶಸ್ಥ ಸಯ್ಯದ್ ಮನ್ಸೂರ್ ಅಲಿ ಟಿಪ್ಪು, ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ, ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ಸಮಾಜಸೇವಕ ಡಾ. ಫಾರೂಕ್ ಮಣೂರ ಸೇರಿದಂತೆ ವಿವಿಧ ಸಮುದಾಯಗಳ ಧಾರ್ಮಿಕ ಮುಖಂಡರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದರು.
ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ರಾಜಿಯಿಲ್ಲದ ಹೋರಾಟ ನಡೆಸಿದ ಭಾರತದ ಪ್ರಮುಖ ದೊರೆಗಳಲ್ಲಿ ಟಿಪ್ಪು ಸುಲ್ತಾನ್ ಅಗ್ರಗಣ್ಯರಾಗಿದ್ದಾರೆ. ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಬ್ರಿಟಿಷರಿಗೆ ಪ್ರಬಲ ಸವಾಲಾಗಿ ನಿಂತ ಅವರು, ಸ್ವಾತಂತ್ರ್ಯಕ್ಕಾಗಿ ರಣರಂಗದಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಅವರ ಕನಸು ಕೇವಲ ರಾಜ್ಯ ವಿಸ್ತರಣೆಯಾಗಿರದೆ, ಆಧುನಿಕ ಹಾಗೂ ಸ್ವಾವಲಂಬಿ ನಾಡಿನ ನಿರ್ಮಾಣವಾಗಿತ್ತು ಎಂದು ಹೇಳಿದರು.
ಜಮೀನ್ದಾರಿ ಪದ್ಧತಿಯನ್ನು ರದ್ದುಗೊಳಿಸಿ, ರೈತರಿಗೆ ಭೂಮಿಯ ಹಕ್ಕು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರು. ರೇಷ್ಮೆ ಕೃಷಿ, ನೀರಾವರಿ ಹಾಗೂ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ತಮ್ಮ ದೂರದೃಷ್ಟಿಯನ್ನು ಪ್ರದರ್ಶಿಸಿದ್ದರು. ಕಲೆ, ಸಾಹಿತ್ಯ ಹಾಗೂ ರಾಕೆಟ್ ತಂತ್ರಜ್ಞಾನದಂತಹ ವೈಜ್ಞಾನಿಕ ಆವಿಷ್ಕಾರಗಳಿಗೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್ ತಮ್ಮ ಆಡಳಿತದಲ್ಲಿ ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸಿದ್ದರು. ಶೃಂಗೇರಿ ಶಾರದಾ ಪೀಠ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಹಾಗೂ ಮೇಲುಕೋಟೆ ಸೇರಿದಂತೆ ಹಲವು ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಅವರು ದತ್ತಿ, ಭೂಮಿ ಮತ್ತು ರಕ್ಷಣೆ ಒದಗಿಸಿರುವುದಕ್ಕೆ ಐತಿಹಾಸಿಕ ದಾಖಲೆಗಳಿವೆ. ಇಂತಹ ಪರಧರ್ಮ ಸಹಿಷ್ಣು ಆಡಳಿತಗಾರನಿಗೆ ರಾಜಕೀಯ ಉದ್ದೇಶಗಳಿಗಾಗಿ ‘ಹಿಂದೂ ದ್ರೋಹಿ’ ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನಗಳು ನಡೆಯುತ್ತಿರುವುದು ವಿಷಾದನೀಯ ಎಂದು ಸಂಘಟಕರು ಖಂಡಿಸಿದರು.
ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿದ್ದ ಟಿಪ್ಪು ಸುಲ್ತಾನ್, ದಲಿತರು ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಸೇನೆ ಮತ್ತು ಆಡಳಿತದಲ್ಲಿ ಉನ್ನತ ಸ್ಥಾನಮಾನಗಳನ್ನು ನೀಡಿದ್ದರು. ಅವರ ಆಡಳಿತ, ಸಾಮಾಜಿಕ ಸುಧಾರಣೆಗಳು ಹಾಗೂ ವೈಜ್ಞಾನಿಕ ಕೊಡುಗೆಗಳ ಕುರಿತು ಜನರಿಗೆ ತಿಳಿಸುವ ಉದ್ದೇಶದಿಂದ ಉತ್ಸವ ಆಯೋಜಿಸಲಾಗಿದೆ ಎಂದರು.
ಉತ್ಸವದಲ್ಲಿ ನಾಡಿನ ಪ್ರಗತಿಪರ ಚಿಂತಕರು, ಇತಿಹಾಸಕಾರರು, ಸಾಹಿತಿಗಳು ಹಾಗೂ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಲಿದ್ದು, ಟಿಪ್ಪು ಸುಲ್ತಾನ್ ಅವರ ಇತಿಹಾಸ ಮತ್ತು ಸೌಹಾರ್ದತೆಯ ಸಂದೇಶವನ್ನು ಜನರಿಗೆ ತಲುಪಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮನ್ನೂರ್ ಆಸ್ಪತ್ರೆಯ ಸ್ಥಾಪಕ ಡಾ. ಫಾರೂಕ್ ಮಣೂರ, ಅವ್ವನ್ನಗೌಡ ಪಾಟೀಲ, ಶ್ರೀಶೈಲ ನಾಯ್ಕೋಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






