ಕಲಬುರಗಿಯಲ್ಲಿ ಯುಗಾದಿ–ಈದುಲ್ ಫಿತ್ರ್ ಆಚರಣೆ

ಕಲಬುರಗಿ: ಸೌಹಾರ್ದ ಕರ್ನಾಟಕ ವೇದಿಕೆ ಹಾಗೂ ಸಮುದಾಯ ಸಂಘಟನೆಯ ಸಹಯೋಗದಲ್ಲಿ ನಗರದ ಜಗತ್ ವೃತ್ತದಲ್ಲಿ ಗುರುವಾರ ಸಂಜೆ ಸೌಹಾರ್ದ ಯುಗಾದಿ–ಈದುಲ್ ಫಿತ್ರ್ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹೋರಾಟಗಾರ್ತಿ ಕೆ.ನೀಲಾ, “ಕರ್ನಾಟಕವು ಸೌಹಾರ್ದತೆಯ ನೆಲವಾಗಿದೆ. ಯುದ್ಧ ಹಾಗೂ ಕೋಮುದ್ವೇಷದ ಪರಿಣಾಮವಾಗಿ ಇಂದಿನ ಜಗತ್ತಿನಲ್ಲಿ ಜನರ ಮನಸುಗಳು ಭಯವಿಹ್ವಲತೆಯಿಂದ ನಲುಗುತ್ತಿವೆ. ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಬಿಡದಂತಹ ಜಾಗತಿಕ ಬೆಳವಣಿಗೆಗಳು ಅಹಿತಕರವಾಗಿವೆ. ಬಲಾಢ್ಯರ ಸಂಪತ್ತಿನ ದಾಹದಿಂದ ಹೆಚ್ಚುತ್ತಿರುವ ಕ್ರೌರ್ಯದಿಂದ ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಹೇಳಿದರು.
ಲೇಖಕಿ ಡಾ. ಮೀನಾಕ್ಷಿ ಬಾಳಿ ಮಾತನಾಡಿ, ನಮ್ಮ ನಾಡು ಶರಣ–ಸೂಫಿ ಸಂತರ ನಾಡಾಗಿದ್ದು, ಈ ಬಾರಿ ಯುಗಾದಿ ಮತ್ತು ಈದುಲ್ ಫಿತ್ರ್ ಹಬ್ಬಗಳು ಪರಸ್ಪರ ಕೈಹಿಡಿದು ಬಂದಿರುವುದು ಸೌಹಾರ್ದತೆಗೆ ಸಂಕೇತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂರಾರು ಜನರಿಗೆ ಬೇವು–ಬೆಲ್ಲದ ಪಾನಕ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಶೈಲ ಘೂಳಿ, ಅಶೋಕ ಶಟಕಾರ, ಡಾ. ಪ್ರಭು ಖಾನಾಪುರೆ, ದತ್ತಾತ್ರೇಯ ಇಕ್ಕಳಕಿ, ಮೊಹಮ್ಮದ್ ಮುಖದಮ್, ಸಾಜಿದ್ ಅಹ್ಮದ್, ಲವಿತ್ರ, ರತ್ನಾ, ಪದ್ಮಿನಿ ಕಿರಣಗಿ, ಸುಜಾತಾ ವೈ, ನಾಗೇಂದ್ರಪ್ಪ ಔರಾದಿ, ಆಲಿಯಾ ಪಟೇಲ್, ರವೀಂದ್ರ ಶಾಬಾದಿ, ಡಾ. ಜಯದೇವಿ ಗಾಯಕವಾಡ, ಡಾ. ಸಿದ್ದಪ್ಪ, ಖೈಸರ್ ಬೇಗಂ, ಡಾ. ಪರವಿನ್ ಸುಲ್ತಾನ, ಡಾ. ಸಮೀನಾ, ಕೋದಂಡರಾಮಪ್ಪ, ಶಿವಲೀಲಾ, ಡಾ. ಜಮುನಾ, ಸರ್ವೇಶ, ಮೆಹಬೂಬ್ ಬಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.






