ಅ.18ರಂದು ಕಲಬುರಗಿಯಲ್ಲಿ ಅಂಡರ್-17 ಫುಟ್ಬಾಲ್ ಆಯ್ಕೆ ಪ್ರಕ್ರಿಯೆ

ಕಲಬುರಗಿ: ಇಂಡಿಯಾ ಖೇಲೋ ಫುಟ್ಬಾಲ್ (ಐಕೆಎಫ್) ಸೀಸನ್-6ರ ಅಂಡರ್-17 ಫುಟ್ಬಾಲ್ ಆಯ್ಕೆ ಪ್ರಕ್ರಿಯೆ ಅಕ್ಟೋಬರ್ 18ರಂದು ನಗರದ ಕೆಸಿಟಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಖಮರ್ ಉಲ್ ಇಸ್ಲಾಂ ಫೌಂಡೇಶನ್ ಅಧ್ಯಕ್ಷ ಫರಾಝ್ ಉಲ್ ಇಸ್ಲಾಂ ತಿಳಿಸಿದ್ದಾರೆ.
ಫುಟ್ಬಾಲ್ನಲ್ಲಿ ಆಸಕ್ತಿ ಹೊಂದಿರುವ ಯುವ ಆಟಗಾರರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಅವರು ಕರೆ ನೀಡಿದರು.
ದೇಶದ ಫುಟ್ಬಾಲ್ ಪ್ರತಿಭೆಗಳನ್ನು ಗುರುತಿಸಿ, ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಐಕೆಎಫ್ ಉತ್ತಮ ವೇದಿಕೆಯಾಗಿದೆ. ಆಯ್ಕೆಯಾಗುವ ಆಟಗಾರರಿಗೆ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ದೊರೆಯಲಿದ್ದು, ಇದು ಅವರ ಕ್ರೀಡಾ ಭವಿಷ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದರು.
ಕಲಬುರಗಿಯಲ್ಲಿ ಐಕೆಎಫ್ ಆಯ್ಕೆ ಪ್ರಕ್ರಿಯೆ ಆಯೋಜಿಸಲು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿರುವ ಗುಲ್ಬರ್ಗಾ ಇತ್ತೆಹಾದ್ ಫುಟ್ಬಾಲ್ ಅಕಾಡೆಮಿಯ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಫುಟ್ಬಾಲ್ ಮಾತ್ರವಲ್ಲದೆ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಯುವಕರನ್ನು ಪ್ರೋತ್ಸಾಹಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದರು.




