ಕಲಬುರಗಿ| ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ನಿವಾರಣೆಯಾಗಿಲ್ಲ: ಸಾಹಿತಿ ಎಚ್.ಟಿ. ಪೋತೆ ಬೇಸರ

ಕಲಬುರಗಿ: “ದೇಶದಲ್ಲಿ ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ, ಇದು ಇಂದಿಗೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಎಂದು ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ, ಸಾಹಿತಿ ಎಚ್.ಟಿ. ಪೋತೆ ಅವರು ಬೇಸರ ವ್ಯಕ್ತಪಡಿಸಿದರು.
ನಗರದ ಕಲಾಮಂದಿರದಲ್ಲಿ ಶನಿವಾರ ಸಂಜೆ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಶಿಕ್ಷಕಿ ಮಮತಾ ಜಾನೆ ಅವರ ‘ಬಾಬಾಸಾಹೇಬರ ನುಡಿಮುತ್ತುಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಕನಕದಾಸರನ್ನು ಹೊರಗೆ ಇಟ್ಟ ಮನುವಾದಿಗಳು, ವಿಶ್ವಗುರು ಬಸವಣ್ಣನವರ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗೆ ಅಪಮಾನ ಮಾಡಿದ್ದಾರೆ. ಇಂತಹ ಮನೋಭಾವಕ್ಕೆ ವಿರೋಧವಾಗಿ ನಾವು ಧ್ವನಿ ಎತ್ತಬೇಕು” ಎಂದು ಹೇಳಿದರು.
“ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ಕುಟುಂಬಕ್ಕಾಗಿ ಹಣ ಸಂಪಾದನೆ ಮಾಡದೇ, ದೇಶದ ಜನರಿಗೆ ಸಂವಿಧಾನ ನೀಡಿ ಸಮಾನತೆಯ ಸಮಾಜ ನಿರ್ಮಿಸಿದರು. ಮಕ್ಕಳಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರ ತಿಳಿಸಿದ್ದಲ್ಲಿ ಮಾತ್ರ ಸಮಾನತೆ ಸಾಧನೆ ಸಾಧ್ಯ” ಎಂದರು.
ಪತ್ರಾಗಾರ ಇಲಾಖೆಯ ಉಪನಿರ್ದೇಶಕರಾದ ಡಾ. ವೀರಶೆಟ್ಟಿ ಗಾರಂಪಳ್ಳಿ ಅವರು ಪುಸ್ತಕದ ವಿಮರ್ಶೆ ಮಾಡುತ್ತಾ, ಅಂಬೇಡ್ಕರ್ ಅವರನ್ನು ನಾವು ಅಕ್ಷರಗಳ ಮೂಲಕವಲ್ಲ, ಅವುಗಳ ನಡುವಿನ ಅರ್ಥದ ಮೂಲಕ ನೋಡಬೇಕು. ಅಂದಾಗ ಮಾತ್ರ ಅವರ ಹೋರಾಟದ ಬದುಕು ನಮ್ಮ ವರ್ತಮಾನದ ಬದುಕಿಗೆ ದಾರಿದೀಪವಾಗಲಿದೆ. ಪುಸ್ತಕ ಓದುವುದರ ಜೊತೆಗೆ ಅದರ ಅನುಭೂತಿ ಅತಿಮುಖ್ಯ. ಬಾಬಾಸಾಹೇಬರು ಬದುಕಿದ್ದಾಗಲೇ ಅವರ 13 ಕೃತಿಗಳು ಇಂಗ್ಲಿಷ್‌ನಲ್ಲಿ ಬಂದಿದ್ದವು. ಕನ್ನಡದಲ್ಲಿಯೇ ಅವರ ಭಾಷಣ ಮತ್ತು ಬರಹಗಳ ಕುರಿತು 22 ಸಂಪುಟಗಳು ಬಂದಿವೆ ಎಂದು ಹೇಳಿದರು.
ಮಾನವೀಯತೆಯ ಬಗ್ಗೆ, ಮನುಷ್ಯತ್ವದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಚಿಂತಿಸುವ ಪ್ರತಿಯೊಬ್ಬರೂ ಮನೆಯಲ್ಲಿ ಇಡಲೇಬೇಕಾದ ಸಂಪುಟಗಳಿವು. ಮಮತಾ ಜಾನೆ ಅವರ ಕೃತಿಯಲ್ಲಿ ಕಾನೂನು, ಧರ್ಮ, ಸಮಾಜ, ದೇವರು, ಮಹಿಳೆ, ಅರ್ಥ, ಸಂಸ್ಕೃತಿ, ಪ್ರಜಾಪ್ರಭುತ್ವ, ರಾಜಕೀಯ, ಶಿಕ್ಷಣ, ಹೀಗೆ ಎಲ್ಲದರ ಕುರಿತಾದ ವಿಷಯಗಳ ಹೇಳಿಕೆಗಳು ಇವೆ ಎಂದರು.
ಸಾಹಿತಿ ಡಾ. ಶ್ರೀಶೈಲ ನಾಗರಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿಡಿಪಿಐ ಸೂರ್ಯಕಾಂತ ಮದಾನೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ. ಹೆಚ್. ನಿರಗುಡಿ ಅವರು ಕಾರ್ಯಕ್ರಮವನ್ನು ಸಂಘಟಿಸಿ, ನಿರೂಪಿಸಿದರು.
ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ ಪಾಳಾ, ಸಾಹಿತಿ ಚಿ.ಸಿ. ನಿಂಗಣ್ಣ, ಡಾ. ಆನಂದ ಸಿದ್ದಾಮಣಿ, ಡಾ. ವಿಜಯಕುಮಾರ ಪರುತೆ, ಸಾಹಿತಿ ದುಖಾನ, ಹೇಮನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







