ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಬಳಕೆ : ಯಡ್ರಾಮಿಯ ರೈತರ ಗಮನ ಸೆಳೆದ ಕಳೆನಾಶಕ ಸಿಂಪಡಣೆ

ಯಡ್ರಾಮಿ: ಸಗರ ನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಯಡ್ರಾಮಿ ತಾಲೂಕಿನಲ್ಲಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದು, ಕಬ್ಬು ಬೆಳೆಗೆ ಡ್ರೋನ್ ಮೂಲಕ ಕಳೆನಾಶಕ ಸಿಂಪಡಿಸುವ ಪದ್ಧತಿ ರೈತರ ಗಮನ ಸೆಳೆಯುತ್ತಿದೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ಜಮೀನಿನ ಕಬ್ಬು ಬೆಳೆಗೆ ಡ್ರೋನ್ ಮೂಲಕ ಕಳೆನಾಶಕ ಸಿಂಪಡಿಸಿ ಆಧುನಿಕ ಕೃಷಿಯತ್ತ ಹೆಜ್ಜೆ ಇಟ್ಟಿದ್ದಾರೆ.
ಕಬ್ಬು ಬೆಳೆಯಲ್ಲಿ ಕಳೆ ಹಾಗೂ ಅತಿಯಾದ ಮುಳ್ಳು ಸಜ್ಜೆಯಿಂದ ಔಷಧ ಸಿಂಪಡಿಸುವುದು ರೈತರಿಗೆ ದೊಡ್ಡ ಸವಾಲಾಗಿತ್ತು. ಕೂಲಿ ಕಾರ್ಮಿಕರ ಕೊರತೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದರು. ಇದೀಗ ಡ್ರೋನ್ ತಂತ್ರಜ್ಞಾನ ಈ ಸಮಸ್ಯೆಗೆ ಪರಿಹಾರವಾಗಿ ಪರಿಣಮಿಸಿದೆ.
ಸುಮಾರು 5 ಲಕ್ಷ ರೂ. ಮೌಲ್ಯದ ಡ್ರೋನ್ ನಿರ್ವಹಣೆಗೆ ಇಬ್ಬರ ತಂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಡ್ರೋನ್ 10 ಲೀಟರ್ ಸಾಮರ್ಥ್ಯದ ಔಷಧ ಮತ್ತು ಕೀಟನಾಶಕವನ್ನು ಹೊತ್ತು ಒಂದು ಎಕರೆ ಕಬ್ಬು ಸೇರಿದಂತೆ ಇತರೆ ಬೆಳೆಗಳಿಗೆ ಸಿಂಪಡಣೆ ಮಾಡಬಲ್ಲದು.
ಡ್ರೋನ್ ಬಳಕೆಯಿಂದ ಕೃಷಿ ಉಪಕರಣಗಳ ಬಳಕೆಯನ್ನು ಶೇ.30ರಷ್ಟು ಕಡಿಮೆ ಮಾಡಬಹುದಾಗಿದ್ದು, ಶೇ.90ರಷ್ಟು ನೀರು ಹಾಗೂ ಶೇ.40ರಷ್ಟು ಔಷಧ ಬಳಕೆಯನ್ನು ಉಳಿತಾಯ ಮಾಡಬಹುದು ಎಂದು ಡ್ರೋನ್ ನಿರ್ವಹಣಾ ತಂಡದ ದೇವಿಂದ್ರಪ್ಪ ಮತ್ತು ಶಿವರಾಜ ತಿಳಿಸಿದ್ದಾರೆ.
ಬೆಳೆಗಳಿಗೆ ಔಷಧ ಸಿಂಪಡಿಸಲು ನೀರು ಸಂಗ್ರಹಿಸುವುದು, ಕೂಲಿ ಕಾರ್ಮಿಕರನ್ನು ಕರೆತರುವುದು ಸೇರಿದಂತೆ ಹಲವು ಸಮಸ್ಯೆಗಳು ರೈತರಿಗೆ ಎದುರಾಗುತ್ತಿದ್ದವು. ಆದರೆ ಡ್ರೋನ್ ಬಳಕೆಯಿಂದ ಕೆಲವೇ ನಿಮಿಷಗಳಲ್ಲಿ 4ರಿಂದ 5 ಕೂಲಿ ಕಾರ್ಮಿಕರ ಕೆಲಸವನ್ನು ಮಾಡಬಹುದಾಗಿದೆ. ಬೆನ್ನಿಗೆ ಪಂಪು ಹೊತ್ತು ದಿನಪೂರ್ತಿ ಶ್ರಮಪಡುವ ಅಗತ್ಯವಿಲ್ಲದಂತಾಗಿದ್ದು, ಹಾನಿಕಾರಕ ಕೀಟನಾಶಕಗಳ ನೇರ ಸಂಪರ್ಕದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಅಪಾಯವೂ ಕಡಿಮೆಯಾಗುತ್ತಿದೆ.
ಡ್ರೋನ್ 8 ರಿಂದ 10 ನಿಮಿಷಗಳಲ್ಲಿ ಒಂದು ಎಕರೆ ಪ್ರದೇಶಕ್ಕೆ ಕಳೆನಾಶಕ ಅಥವಾ ಕ್ರಿಮಿನಾಶಕ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ಪೆಟ್ರೋಲ್ ಜನರೇಟರ್ ಹಾಗೂ ಎರಡು ಸೆಟ್ ಬ್ಯಾಟರಿಗಳ ವ್ಯವಸ್ಥೆ ಮಾಡಲಾಗಿದೆ. ಬ್ಯಾಟರಿಯನ್ನು 30 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ ದಿನಕ್ಕೆ 40ರಿಂದ 50 ಎಕರೆ ಪ್ರದೇಶದಲ್ಲಿ ಸಿಂಪಡಣೆ ನಡೆಸಬಹುದು.
10 ಲೀಟರ್ ನೀರು ಮತ್ತು ಔಷಧ ಮಿಶ್ರಿತ ಸುಮಾರು 12 ಲೀಟರ್ ದ್ರಾವಣವನ್ನು ಸಂಗ್ರಹಿಸುವ ಈ ಡ್ರೋನ್ ಒಮ್ಮೆಗೆ 15 ನಿಮಿಷಗಳ ಕಾಲ 500 ಮೀಟರ್ ದೂರ ಹಾಗೂ 50 ಮೀಟರ್ ಎತ್ತರದವರೆಗೆ ಹಾರಬಲ್ಲದು. ಒಂದು ಎಕರೆ ಸಿಂಪಡಣೆಗೆ 400 ರೂ. ಬಾಡಿಗೆ ಪಡೆಯಲಾಗುತ್ತಿದೆ.
ನಮ್ಮ ಜಮೀನಿನಲ್ಲಿ ಕಬ್ಬು ಹಾಕಿ 30 ದಿನಗಳೊಳಗೆ ಡ್ರೋನ್ ಮೂಲಕ ಕಳೆನಾಶಕ ಸಿಂಪಡಿಸಿದ್ದರಿಂದ ಚಿಕ್ಕದಾಗಿದ್ದ ಕಳೆ ಕ್ರಮೇಣ ಒಣಗುತ್ತಿದೆ. ಡ್ರೋನ್ ಬಳಕೆಯಿಂದ ಹಣ, ಸಮಯ ಹಾಗೂ ಶ್ರಮ ಉಳಿತಾಯವಾಗುತ್ತಿದ್ದು, ರೈತರಿಗೆ ಇದು ತುಂಬಾ ಸಹಾಯಕವಾಗಿದೆ.
-ವಾಲು ಚವ್ಹಾಣ, ರೈತ, ನಾಗರಹಳ್ಳಿ ತಾಂಡ






