ಕಲಬುರಗಿ ವಿಭಾಗ ಪ್ರಥಮ ವಚನ ಸಾಹಿತ್ಯ ಸಮ್ಮೇಳನ

ಕಲಬುರಗಿ: ವಚನ ಸಾಹಿತ್ಯವು ಊಹೆ ಅಥವಾ ಕಲ್ಪನೆಯ ಸಾಹಿತ್ಯವಲ್ಲ. ಅದು ಜನಮಾನಸದಲ್ಲಿ ಬೇರೂರಿರುವ ಶರಣರ ಅನುಭಾವದ ಮಾತುಗಳಾಗಿದ್ದು, ಆತ್ಮವಿಮರ್ಶೆಯ ಮೂಲಕ ಹೊರಹೊಮ್ಮಿದ ಅನುಭಾವದ ಸತ್ಯವಾಗಿದೆ ಎಂದು ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ಕನ್ನಡ ಭವನದ ಅಂಗಳದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ರವಿವಾರ ನಡೆದ ಕಲಬುರಗಿ ವಿಭಾಗ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಚನಾಭಿಮಾನಿಗಳಾಗುವುದಕ್ಕಿಂತ ವಚನಾನುಯಾಯಿಗಳಾಗುವುದು ಮುಖ್ಯ. ಬಸವ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ಡಾ. ಎಂ.ಎಂ. ಕಲಬುರಗಿಯವರು ಬಸವ ತತ್ವಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡು ಹುತಾತ್ಮರಾದವರು. ಇಂದಿನ ಯುವಕರಿಗೆ ವಚನ ಸಾಹಿತ್ಯದ ದರ್ಶನ ಮಾಡಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಸಮಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ
ಸಮ್ಮೇಳನ ಉದ್ಘಾಟಿಸಿದ ಹಿರಿಯ ಲೇಖಕಿ ಡಾ. ಜಯದೇವಿ ಗಾಯಕವಾಡ ಮಾತನಾಡಿ, ಜನಸಾಮಾನ್ಯರಿಗೆ ಮಾತನಾಡುವ ಶಕ್ತಿ ಹಾಗೂ ಆತ್ಮವಿಶ್ವಾಸ ನೀಡಿದ ಬಸವಾದಿ ಶರಣರ ವಚನ ಸಾಹಿತ್ಯವು ದೇಶದಲ್ಲಿ ಪ್ರಜಾಪ್ರಭುತ್ವದ ಆಶಯಗಳಿಗೆ ಬುನಾದಿ ಹಾಕಿದ ಸಾಹಿತ್ಯವಾಗಿದೆ ಎಂದರು.
ಸಮಾಜವನ್ನು ತಿದ್ದುವ ಕಾರ್ಯ ಮಾಡಿದ ವಚನಕಾರರು ಅಸ್ಪೃಶ್ಯತೆ ಹಾಗೂ ಮೇಲು–ಕೀಳು ಭೇದಗಳನ್ನು ಮೆಟ್ಟಿನಿಂತು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಆಶಯಗಳನ್ನು ಜನರಿಗೆ ಪರಿಚಯಿಸಿದ ಅನುಭವ ಮಂಟಪ ಮತ್ತು ಶರಣರ ವೈಚಾರಿಕ ಚಳವಳಿ ಇಂದಿಗೂ ಪ್ರಸ್ತುತವಾಗಿದೆ. ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದವರು ಶರಣರು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಚನ ಸಾಹಿತ್ಯದ ಮೂಲಕ ಕನ್ನಡ ಭಾಷೆ ಶ್ರೀಮಂತಗೊಂಡಿದೆ. ವಚನ ಸಾಹಿತ್ಯವು ವಿಶ್ವ ಸಾಹಿತ್ಯದ ಭಾಗವಾಗಿದ್ದು, ಕನ್ನಡ ಭಾಷೆಯ ಸೊಬಗನ್ನು ವಿಶ್ವದಾದ್ಯಂತ ವಿಸ್ತರಿಸಿದೆ. ಕನ್ನಡ ಭಾಷೆ ಪ್ರತಿಯೊಬ್ಬರ ಉಸಿರಾಗಬೇಕು. ಆಗ ಮಾತ್ರ ಕನ್ನಡ ಮತ್ತಷ್ಟು ಶ್ರೀಮಂತಗೊಳ್ಳಲು ಸಾಧ್ಯ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಮಾತನಾಡಿ, ವಚನಕಾರರು ಕೇವಲ ಬೋಧನೆ ಮಾಡಲಿಲ್ಲ; ತಮ್ಮ ಬದುಕಿನ ನಡೆ–ನುಡಿಯ ಮೂಲಕವೇ ಆದರ್ಶ ತೋರಿಸಿದರು. ಕಾಯಕ ಮತ್ತು ದಾಸೋಹದ ತತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಬಸವಣ್ಣ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಮಾತ್ರವಲ್ಲ, ವಿಶ್ವನಾಯಕರಾಗಿದ್ದಾರೆ ಎಂದು ಬಣ್ಣಿಸಿದರು.
ಮಹಾತ್ಮರ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಪರಿಷತ್ ಕಾರ್ಯನಿರ್ವಹಿಸುತ್ತಿದ್ದು, ಜನಪರ ಆಲೋಚನೆಗಳೊಂದಿಗೆ ಸಂಘಟನೆಯನ್ನು ಬಲಪಡಿಸಲಾಗಿದೆ ಎಂದರು.
ಸಾರಂಗಮಠದ ಜಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಮಾಜಿ ಮೇಯರ್ ಶರಣಕುಮಾರ ಮೋದಿ, ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಗ್ರಂಥಪಾಲಕ ಡಾ. ಗಣಪತಿ ಸಿಂಧೆ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ, ಉದ್ಯಮಿ ರವಿ ವಿಭೂತಿ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಮುಡುಬಿ ಗುಂಡೇರಾವ, ಜಿ.ಜಿ. ವಣಿಕ್ಯಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗಮನ ಸೆಳೆದ ‘ಮಾತೆಂಬುದು ಜ್ಯೋತಿರ್ಲಿಂಗ’ ಗೋಷ್ಠಿ
ಸಮ್ಮೇಳನದಲ್ಲಿ ನಡೆದ ‘ಮಾತೆಂಬುದು ಜ್ಯೋತಿರ್ಲಿಂಗ’ ಗೋಷ್ಠಿ ಗಮನ ಸೆಳೆಯಿತು. ‘ವಚನ ಸಾಹಿತ್ಯ ಮತ್ತು ಸಂವಿಧಾನ’ ವಿಷಯ ಕುರಿತು ಪತ್ರಕರ್ತ ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಿ, ವಚನ ಸಾಹಿತ್ಯವು ಭಾರತೀಯ ಸಂವಿಧಾನದಂತೆ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳ ಆಶಯಗಳನ್ನು ಪ್ರತಿಪಾದಿಸುತ್ತದೆ ಎಂದರು.
ಬಸವಾದಿ ಶರಣರ ವಚನಗಳಲ್ಲಿ ಇಂದಿನ ಸಂವಿಧಾನದ ಮೂಲ ಆಶಯಗಳನ್ನು ಕಾಣಬಹುದು. ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಿದ್ದ ಅನುಭವ ಮಂಟಪವು ಪ್ರಜಾಪ್ರಭುತ್ವದ ಅತ್ಯುತ್ತಮ ಮಾದರಿಯಾಗಿತ್ತು. ಹೀಗಾಗಿ ಅಂದಿನ ಅನುಭವ ಮಂಟಪವೇ ಇಂದಿನ ಸಂಸತ್ತಿನ ಪರಿಕಲ್ಪನೆಗೆ ಹೋಲಿಕೆಯಾಗುತ್ತದೆ ಎಂದು ಹೇಳಿದರು.
‘ವಚನ ಸಾಹಿತ್ಯ ಮತ್ತು ಮಹಿಳಾ ಸಂವೇದನೆ’ ಕುರಿತು ಡಾ. ವಿದ್ಯಾವತಿ ಬಲ್ಲೂರ ಮಾತನಾಡಿ, ಮಹಿಳೆಯರ ಮೇಲಿನ ಮೇಲು–ಕೀಳು ಭಾವನೆ, ಅನ್ಯಾಯ ಹಾಗೂ ತಾರತಮ್ಯವನ್ನು ಪ್ರಶ್ನಿಸಿದ ವಚನಕಾರರು ಮಹಿಳೆಯರಲ್ಲಿ ಆತ್ಮಗೌರವ ಮತ್ತು ನೈತಿಕ ಸ್ಥೈರ್ಯ ತುಂಬಿದರು ಎಂದರು.
ಅಬಲೆ ಎಂಬ ಕೀಳರಿಮೆಯಿಂದ ಮಹಿಳೆಯನ್ನು ಹೊರತಂದು ದೈವತ್ವದ ಸ್ಥಾನಕ್ಕೆ ಏರಿಸುವ ಚಿಂತನೆ ವಚನಗಳಲ್ಲಿ ಕಾಣುತ್ತದೆ. ಲಿಂಗತಾರತಮ್ಯವನ್ನು ವಿರೋಧಿಸಿ ಮಹಿಳೆಯರ ಆತ್ಮಗೌರವಕ್ಕೆ ಶರಣರು ಮಹತ್ವ ನೀಡಿದರು ಎಂದು ಹೇಳಿದರು.
ಹೋರಾಟಗಾರ ಮರಿಯಪ್ಪ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಆರ್.ಜಿ. ಶಟಗಾರ, ಆನಂದ ಪಾಟೀಲ ಕೊರಳ್ಳಿ, ಬಸವರಾಜ ಸಾಗರ, ನೀಲಕಂಠ ಕಣ್ಣಿ, ಬಸವರಾಜ ಮೊರಬದ ಹಾಗೂ ಸಿದ್ಧಲಿಂಗ ಬಾಳಿ ಉಪಸ್ಥಿತರಿದ್ದರು.
ಆಧುನಿಕ ವಚನಗಳ ವಾಚನ
‘ಯನಗೊಲಿದ ವಚನ’ ಎಂಬ ಆಧುನಿಕ ವಚನ ವಾಚನ ಗೋಷ್ಠಿಯಲ್ಲಿ ಹಲವು ಹಿರಿಯ ಕವಿಗಳು ತಮ್ಮ ಸ್ವರಚಿತ ಆಧುನಿಕ ವಚನಗಳನ್ನು ವಾಚಿಸಿ ಗಮನ ಸೆಳೆದರು. ಹಿರಿಯ ಲೇಖಕಿ ಡಾ. ಶೋಭಾದೇವಿ ಚೆಕ್ಕಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕೋನೆಕ್ ಹಾಗೂ ಡಾ. ಎಸ್.ಎಸ್. ಪಾಟೀಲ ವೇದಿಕೆಯಲ್ಲಿದ್ದರು.
ವಚನಗಳ ಜಾಗೃತಿಯ ಮರುದರ್ಶನ ಅಗತ್ಯ
ಸಮಾರೋಪದಲ್ಲಿ ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಮಾತನಾಡಿ, ವಚನ ಚಳವಳಿಗೆ ದೇವರ ದಾಸಿಮಯ್ಯ ಭದ್ರ ಬುನಾದಿ ಹಾಕಿದರು. ಕಲ್ಯಾಣದಲ್ಲಿ ಆ ಚಳವಳಿ ಫಲ ನೀಡಿತು. ದೇವರನ್ನು ಹುಡುಕುವ ಹಾಗೂ ತೋರಿಸುವ ಹೊಸ ಮಾರ್ಗವನ್ನು ಶರಣರು ಸಮಾಜಕ್ಕೆ ಪರಿಚಯಿಸಿದರು ಎಂದರು.
ಶರಣರ ವೈಚಾರಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಹಸನಾಗುತ್ತದೆ. ಶರಣರ ಆಶಯಗಳು ಬಡವರು, ದಲಿತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಉದ್ಧಾರವನ್ನು ಒಳಗೊಂಡಿದ್ದವು. ಶರಣರನ್ನು ಇಂದಿಗೂ ಸಮಾಜ ಸ್ಮರಿಸುತ್ತಿರುವುದಕ್ಕೆ ಅವರ ಜನಪರ ಚಿಂತನೆಯೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ತೊನಸನಹಳ್ಳಿ ಅಲ್ಲಮಪ್ರಭು ಪೀಠದ ಶ್ರೀ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅಪ್ಪಾರಾವ ಅಕ್ಕೋಣೆ, ರವೀಂದ್ರ ಶಾಬಾದಿ ಹಾಗೂ ವೀರೇಶ ಬೋಳಶೆಟ್ಟಿ ಮಾತನಾಡಿದರು.
ಸಮ್ಮೇಳನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನೇಕರಿಗೆ ‘ಕಾಯಕ ರತ್ನ’ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು. ಸಂಗೀತ ಕಲಾವಿದ ರೇವಯ್ಯ ವಸ್ತçದಮಠ ಹಾಗೂ ಸಂಗಡಿಗರು ಪ್ರಸ್ತುತಪಡಿಸಿದ ವಚನ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.






