ವಾಡಿ | ನ.22ರಿಂದ ಬೆಂಗಳೂರಿನಲ್ಲಿ ಎಐಟಿಯುಸಿಯ 43ನೇ ರಾಷ್ಟ್ರೀಯ ಸಮ್ಮೇಳನ
ಸಮ್ಮೇಳನದ ಯಶಸ್ವಿಗೆ ಕಾರ್ಮಿಕರು ಪಾಲ್ಗೊಳ್ಳಲು ಕರೆ

ವಾಡಿ : ಬೆಂಗಳೂರಿನಲ್ಲಿ ನವೆಂಬರ್ 22ರಿಂದ 26ರವರೆಗೆ ನಡೆಯಲಿರುವ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ 43ನೇ ರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ವಾಡಿಯ ಎಲ್ಲ ಕಾರ್ಮಿಕರು ಪಾಲ್ಗೊಳ್ಳಬೇಕು ಎಂದು ವಾಡಿ ಎಸಿಸಿ ಅದಾನಿ ಸಿಮೆಂಟ್ ಮಜದೂರ ಸಂಘ ಕರೆ ನೀಡಿದೆ.
ಬುಧವಾರ ಎಸಿಸಿ ಕಾರ್ಮಿಕ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಟಿಯುಸಿ ವಾಡಿ ಎಸಿಸಿ ಅದಾನಿ ಸಿಮೆಂಟ್ ಮಜದೂರ ಸಂಘದ ಪ್ರಧಾನ ಕಾರ್ಯದರ್ಶಿ ವಿಶಾಲ ನಂದೂರಕರ, ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಸಮ್ಮೇಳನದಲ್ಲಿ ದೇಶದ ಎಲ್ಲ ರಾಜ್ಯಗಳಿಂದ 1,200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಉತ್ಪಾದನಾ ವಲಯ, ಸಾರಿಗೆ, ವಿದ್ಯುತ್, ಗಣಿಗಾರಿಕೆ, ಕಲ್ಲಿದ್ದಲು, ರಕ್ಷಣಾ ವಲಯ, ಬ್ಯಾಂಕಿಂಗ್, ವಿಮೆ, ತೋಟಗಾರಿಕೆ, ಕಟ್ಟಡ ನಿರ್ಮಾಣ ಸೇರಿದಂತೆ ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ, ಆಶಾ, ಬೀಡಿ, ಕೃಷಿ ಹಾಗೂ ಮೀನುಗಾರಿಕೆ ಕ್ಷೇತ್ರಗಳ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸೈಪ್ರಸ್, ಪೋರ್ಚುಗಲ್, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಪ್ಯಾಲೆಸ್ತೀನ್, ಇರಾನ್ ಮತ್ತು ಬಹ್ರೇನ್ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳನ್ನು ಪ್ರತಿನಿಧಿಸುವ 50ಕ್ಕೂ ಅಧಿಕ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಕಾರ್ಮಿಕ ವರ್ಗದ ಪ್ರಮುಖ ಸಮಸ್ಯೆಗಳು ಹಾಗೂ ಪ್ರಸ್ತುತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ಬೆಲೆ ಏರಿಕೆ, ನಿರುದ್ಯೋಗ, ಖಾಸಗೀಕರಣ, ಆರೋಗ್ಯ ಮತ್ತು ಶಿಕ್ಷಣ ಸೇವೆಗಳ ಸ್ಥಿತಿಗತಿಗಳು ಪ್ರಮುಖ ಚರ್ಚಾ ವಿಷಯಗಳಾಗಿವೆ ಎಂದು ತಿಳಿಸಿದರು.
ವೈಜ್ಞಾನಿಕ ಹಾಗೂ ಅಗತ್ಯಾಧಾರಿತ ಕನಿಷ್ಠ ವೇತನ ಜಾರಿ, ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಖಾತರಿ ಮತ್ತು ಗಿಗ್ ಕಾರ್ಮಿಕರ ಹಕ್ಕುಗಳ ರಕ್ಷಣೆ ಸೇರಿದಂತೆ ಹಲವು ವಿಷಯಗಳ ಕುರಿತು ಸಮ್ಮೇಳನದಲ್ಲಿ ನಿರ್ಣಯಗಳನ್ನು ಅಂಗೀಕರಿಸಲಾಗುವುದು. ಅಲ್ಲದೆ, ಕಾರ್ಮಿಕರ ಹಕ್ಕುಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಮುಂದಿನ ಹಂತದ ಹೋರಾಟ ಹಾಗೂ ಕಾರ್ಯಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಐಟಿಯುಸಿ ವಾಡಿ ಕಾರ್ಮಿಕ ಘಟಕದ ಅಧ್ಯಕ್ಷ ಶರಣಬಸು ಸಿರೂರಕರ, ಪದಾಧಿಕಾರಿಗಳಾದ ಅನೀಲಕುಮಾರ ಸಿಬೋನೂರ, ಸತೀಶ ಭಾಗೋಡಿ, ದೀಪಕ ಪೂಜಾರಿ, ಉಮೇಶ ಪವಾರ, ಅವಿನಾಶ ರಾಠೋಡ ಹಾಗೂ ಸಂಜಯ ರಾಠೋಡ ಉಪಸ್ಥಿತರಿದ್ದರು.






