ವಾಡಿ | ಮಹಿಳೆಯರಲ್ಲಿ ಕಾನೂನು ಅರಿವು ಹೆಚ್ಚಿದರೆ ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ: ಪಿಎಸ್‌ಐ ರೇಣುಕಾ

ವಾಡಿ: ಮಹಿಳೆಯರಲ್ಲಿ ಕಾನೂನು ಹಾಗೂ ಮಹಿಳಾ ಹಕ್ಕುಗಳ ಕುರಿತು ಅರಿವು ಮೂಡಿದರೆ ಸುರಕ್ಷಿತ ಮತ್ತು ಸಮಾನ ಸಮಾಜ ನಿರ್ಮಾಣ ಸಾಧ್ಯ ಎಂದು ವಾಡಿ ಪೊಲೀಸ್ ಠಾಣೆಯ ಪಿಎಸ್‌ಐ ರೇಣುಕಾ (ಅಪರಾಧ ವಿಭಾಗ) ಅವರು ಹೇಳಿದರು.
ವಾಡಿ ವಲಯದ ಹನುಮಾನನಗರದಲ್ಲಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರದಕ್ಷಿಣೆ ನೀಡುವುದು ಹಾಗೂ ಪಡೆಯುವುದು ಎರಡೂ ಕಾನೂನುಬಾಹಿರ ಅಪರಾಧಗಳಾಗಿದ್ದು, ಈ ಕುರಿತು ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು ಮಹಿಳಾ ಸಹಾಯವಾಣಿ 181 ಹಾಗೂ ತುರ್ತು ಸೇವೆ 112 ಮೂಲಕ ನೆರವು ಪಡೆಯಬಹುದು ಎಂದು ಮಾಹಿತಿ ನೀಡಿದರು.
ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪೊಕ್ಸೊ (POCSO) ಕಾಯ್ದೆಯ ಕುರಿತು ಪಾಲಕರು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿದರೆ ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿರಿಸಬಹುದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಯಾವುದೇ ಲೈಂಗಿಕ ಅಪರಾಧಕ್ಕೆ ಪೊಕ್ಸೊ ಕಾಯ್ದೆ ಅನ್ವಯವಾಗುತ್ತದೆ. ಇಂತಹ ಪ್ರಕರಣಗಳ ಬಗ್ಗೆ ಮಾಹಿತಿ ದೊರೆತರೆ ಸಂಬಂಧಿತ ಅಧಿಕಾರಿಗಳಿಗೆ ತಿಳಿಸುವುದು ಪ್ರತಿಯೊಬ್ಬರ ಕಾನೂನುಬದ್ಧ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ರಾಜು ಮುಕ್ಕಣ್ಣ, ಪುರಸಭೆಯ ಮಾಜಿ ಅಧ್ಯಕ್ಷ ಅಬ್ರಾಹಂ ರಾಜಣ್ಣ, ಶೈನಾಜ್ ಬೇಗಂ, ಜ್ಞಾನ ವಿಕಾಸ ಯೋಜನೆಯ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಜ್ಯೋತಿ ಜೋಳದ ಹಾಗೂ ವಲಯದ ಮೇಲ್ವಿಚಾರಕಿ ಅರ್ಚನಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸದಸ್ಯರಿಗಾಗಿ ಆಟೋಟ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಭೆಯಲ್ಲಿ ಸೇವಾ ಪ್ರತಿನಿಧಿ ಗೀತಾ, ಸಿದ್ದಲಿಂಗಮ್ಮ, ಪ್ರೇಮಾ, ಸೇವಾದಾರರಾದ ವಿಮಲಾಬಾಯಿ, ಭಾರತಿ, ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.






