ವಾಡಿ | ಹೊರಗುತ್ತಿಗೆ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಲು ಆಗ್ರಹ

ವಾಡಿ: ಕಲಬುರಗಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯು ಮೇ 22ರಂದು ಹೊರಡಿಸಿರುವ ಪರಿಷ್ಕೃತ ಕನಿಷ್ಠ ವೇತನದ ಆದೇಶದಂತೆ ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಆಗ್ರಹಿಸಿದೆ.
ವಾಡಿ ಪಟ್ಟಣದ ಹಾಸ್ಟೆಲ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರು ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವಂತೆ ಹಾಗೂ ಬಾಕಿ ಇರುವ ವೇತನದ ವ್ಯತ್ಯಾಸದ ಮೊತ್ತವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪತ್ರ ಚಳವಳಿ ಹಮ್ಮಿಕೊಂಡರು.
ಕನಿಷ್ಠ ವೇತನ ಜಾರಿಗಾಗಿ ಕಾರ್ಮಿಕರು ಹೋರಾಟ ನಡೆಸಿದ ಪರಿಣಾಮವಾಗಿ ಕಾರ್ಮಿಕ ಇಲಾಖೆ ಪರಿಷ್ಕೃತ ವೇತನದ ಆದೇಶ ಹೊರಡಿಸಿದೆ. ಆದರೆ, ಸರ್ಕಾರ ಮತ್ತು ಆರ್ಥಿಕ ಇಲಾಖೆಯು ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಆದೇಶವನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿವೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಆದೇಶ ಹೊರಡಿಸಿದ್ದರೂ ಅದರ ಪ್ರಯೋಜನ ಕಾರ್ಮಿಕರಿಗೆ ತಲುಪದಿರುವುದು ವಿಷಾದನೀಯ. ದಿನನಿತ್ಯ ದುಡಿದು ಜೀವನ ಸಾಗಿಸುವ ಹೊರಗುತ್ತಿಗೆ ಕಾರ್ಮಿಕರಿಗೆ ನ್ಯಾಯಯುತ ವೇತನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಯಾವುದೇ ವಿಳಂಬವಿಲ್ಲದೆ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸಿ, ಕಾರ್ಮಿಕರಿಗೆ ಸಿಗಬೇಕಾದ ವೇತನದ ವ್ಯತ್ಯಾಸದ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪತ್ರ ಚಳವಳಿಯ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಶರಣು ಹೇರೂರ್, ತಾಲೂಕು ಜಂಟಿ ಕಾರ್ಯದರ್ಶಿ ರಾಜು ಒಡೆಯರ್, ಈಶಮ್ಮ ನಾಲ್ವಾರ್, ಚಂದ್ರು ಧನ್ನೆಕರ್, ವಿದ್ಯಾವತಿ ಬಡಿಗೇರ್, ಸಿದ್ದಮ್ಮ ಕಾಶಿ, ಯಲ್ಲಮ್ಮ ನಾಲ್ವಾರ್, ಬನಮ್ಮ ದೇವದುರ್ಗ, ಭೀಮಷಪ್ಪ ದಂಡೋತಿ ಹಾಗೂ ರುಕ್ಕಮ್ಮ ರಾವುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






