ವಾಡಿ | ಜ.11 ರಂದು 'ಮರ್ಯಾದೆಗೇಡು ಹತ್ಯೆಗಳ' ಕುರಿತು ಸಂಚಲನ ವೇದಿಕೆಯಿಂದ ಸಂವಾದ ಕಾರ್ಯಕ್ರಮ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ವತಿಯಿಂದ "ಮರ್ಯಾದೆಗೇಡು ಹತ್ಯೆ ಹಿಂದಿನ ಮನುವಾದ ಹುಡುಕುತ್ತಾ" ಎಂಬ ಶೀರ್ಷಿಕೆಯಡಿ ರವಿವಾರ (ಜ.11) ಬೆಳಿಗ್ಗೆ 10:30ಕ್ಕೆ ವಿಶೇಷ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಶ್ರವಣಕುಮಾರ ಮೂಸಲಗಿ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾತಿಯ ಮೇಲರಿಮೆಯಲ್ಲಿ ಹೆತ್ತವರೇ ತನ್ನ ಕರುಳಿನ ಕುಡಿಯನ್ನು ಕತ್ತರಿಸುವ ಮಟ್ಟಿಗೆ ಧರ್ಮ ಮತ್ತು ಜಾತಿಯ ಅಫೀಮು ಸಮಾಜದಲ್ಲಿ ಹರಡಿದೆ. ಇದನ್ನು ಮಟ್ಟಹಾಕಲು ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವನ್ನು ಯುವಜನರ ಮನಸ್ಸಿನಲ್ಲಿ ಬಿತ್ತುವ ಉದ್ದೇಶದಿಂದ ಈ ಸಂವಾದವನ್ನು ಆಯೋಜಿಸಲಾಗಿದೆ ಎಂದರು.
ಪಟ್ಟಣದ ಸೇಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಕಾಶಿನಾಥ ಧನ್ನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸ್ತ್ರೀವಾದಿ ಚಿಂತಕಿ ಹಾಗೂ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಜಯದೇವಿ ಗಾಯಕವಾಡ ಅವರು ವಿಶೇಷ ಉಪನ್ಯಾಸ ನೀಡಿ ಸಂವಾದ ನಡೆಸಿಕೊಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಖೇಮಲಿಂಗ ಬೆಳಮಗಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸೇಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಗ್ರೇಸಿ ಹಾಗೂ ವಿ.ಪಿ. ನಾಯಕ ಪಿ.ಯು. ಕಾಲೇಜಿನ ಉಪನ್ಯಾಸಕಿ ಕು. ಯಶೋಧಾ ಪವಾರ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.







