ವಾಡಿ | ಸ್ಪರ್ಧೆಗಾಗಿ ಪ್ರಬಂಧ ಬೇಡ, ಜ್ಞಾನಕ್ಕಾಗಿ ಬರೆಯಿರಿ : ಕಾಶಿನಾಥ ಧನ್ನಿ

ವಾಡಿ,ಜ.18: ಪ್ರಬಂಧವನ್ನು ಸ್ಪರ್ಧೆಗಾಗಿ ಬರೆಯುವುದನ್ನು ಬಿಟ್ಟು, ಸಂವಿಧಾನದ ಮಹತ್ವ ಅರಿಯಲು ಮತ್ತು ಜ್ಞಾನ ವೃದ್ಧಿಗಾಗಿ ಬರೆಯಬೇಕು ಎಂದು ಪುರಸಭೆ ಸಮುದಾಯ ಸಂಘಟನಾಧಿಕಾರಿ ಕಾಶಿನಾಥ ಧನ್ನಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ಸಿದ್ದಾರ್ಥ ತರುಣ ಸಂಘ ಶನಿವಾರ ಸ್ಥಳೀಯ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ‘ಭಾರತ ಸಂವಿಧಾನದ ಮಹತ್ವ’ ಕುರಿತು ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಸಂದರ್ಭ ಸುಮಾರು 35ಕ್ಕೂ ದೇಶಗಳಿಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಆ ದೇಶಗಳು ಇಂದು ಜನಾಂಗೀಯ ಗಲಭೆಯಿಂದ ದಿವಾಳಿಯಾಗಿ ಹೋಗಿವೆ. ಆದರೆ, ಅಸ್ಪಶ್ಯತೆ ಹಾಗೂ ಪುರುಷ ಪ್ರಾಧಾನ್ಯತೆಯೇ ಪ್ರಧಾನವಾಗಿದ್ದ ಈ ದೇಶ ಇಂದಿಗೂ ದಿವಾಳಿಯಾಗದಿರಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಮಾನತೆ ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಒಳಗೊಂಡ ಸಂವಿಧಾನ ಕಾರಣ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಂವಿಧಾನ ಯಾರು ಬರೆದರು? ಎನ್ನುವ ಬಗ್ಗೆ ಹಲವಾರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂಬೇಡ್ಕರ್ ಅವರು ಸಂವಿಧಾನವೇ ಬರೆದಿಲ್ಲ ಎಂದು ವದಂತಿ ಕೆಲವು ಕಿಡಿಗೆಡಿಗಳು ಹಬ್ಬಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಬಹಳ ಮಹತ್ವ ನೀಡಿದ್ದಾರೆ. ಅವರ ಜೀವನ ಮತ್ತು ಸಂಘರ್ಷದ ಬಗ್ಗೆ ತಿಳಿದುಕೊಳ್ಳುವ ಮೂಲಕ ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಖೇಮಲಿಂಗ ಬೆಳಮಗಿ, ಅಪ್ಪಾರಾವ ಬಿಲಗುಂದಿ, ಮಲ್ಲಿಕಾರ್ಜುನ ಮರತೂರ, ಲಕ್ಷ್ಮೀ ಜೋಗೂರ, ಮರಲಿಂಗ ಮಾಲಗತ್ತಿ, ಪರಮೇಶ್ವರ ಮದಗುಣಕಿ, ಶಾಮ, ಸಿದ್ದಲಿಂಗ ಬಡಿಗೇರ, ಸಿದ್ಧಾರ್ಥ ತರುಣ ಸಂಘದ ಅಧ್ಯಕ್ಷ ದಿಲೀಪ ಮೈನಾಳಕರ, ಮಹೇಶ ರಾಜಳ್ಳಿ, ವಿಶಾಲ ಬಡಿಗೇರ, ಅರ್ಜುನ ಮರತೂರ, ಸಂಘಪ್ರಿಯ ಬಡಿಗೇರ, ಭೀಮರಾವ ನಿಂಬಾಳಕ, ಮಲ್ಲಿನಾಥ ದೇವಕರ, ಮುಕುಂದ ಕರನಿ, ನಾಗಾರ್ಜುನ ತೆಗನೂರ, ಖಂಡು ರಾಜಳ್ಳಿ, ಬಿಜಯ ಗೋಪಾಳೆ ಸೇರಿದಂತೆ ಹಲವರಿದ್ದರು. ಸಂತೋಷ ಕೋಮಟೆ ಸ್ವಾಗತಿಸಿದರು. ರವಿ ಕೋಳಕೂರ ಕಾರ್ಯಕ್ರಮ ನಿರೂಪಿಸಿದರು.







