ವಾಡಿ | ವಾಲಿಬಾಲ್ ಪಂದ್ಯಾವಳಿಯಲ್ಲಿ ಡಾ.ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳ ಹ್ಯಾಟ್ರಿಕ್ ಗೆಲುವು

ವಾಡಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ಸತತ ಮೂರನೇ ಗೆಲುವು ಸಾಧಿಸಿ ಹ್ಯಾಟ್ರಿಕ್ ಚಾಂಪಿಯನ್ ಆಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಾಡಿ ಅಂಬೇಡ್ಕರ್ ವಸತಿ ಶಾಲೆಯ ತಂಡವು ಎಲ್ಲಾ ಎದುರಾಳಿ ತಂಡಗಳನ್ನು ಮಣಿಸಿ ಪ್ರಥಮ ಸ್ಥಾನ ಪಡೆದು ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.
ಈ ತಂಡವು ಹೋಬಳಿ ಮಟ್ಟದಿಂದಲೇ ತನ್ನ ಗೆಲುವಿನ ಓಟ ಆರಂಭಿಸಿ, ತಾಲೂಕು ಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದಿತ್ತು. ಇದೀಗ ಜಿಲ್ಲಾ ಮಟ್ಟದಲ್ಲಿಯೂ ಅಜೇಯವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಕ್ರೀಡಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ವಿದ್ಯಾರ್ಥಿಗಳ ಸಾಧನೆಗೆ ದೈಹಿಕ ಶಿಕ್ಷಕ ಶ್ರೀನಾಥ ಇರಗೊಂಡ ಅವರ ತರಬೇತಿ ಪ್ರಮುಖ ಕಾರಣವಾಗಿದೆ. ಶಾಲೆಯ ಪ್ರಾಂಶುಪಾಲ ಉದಯ ಧರೆಣ್ಣವರ್, ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ದೈಹಿಕ ಶಿಕ್ಷಕ ಶ್ರೀನಾಥ ಇರಗೊಂಡ ಮಾತನಾಡಿ, ವಿದ್ಯಾರ್ಥಿಗಳ ನಿರಂತರ ಅಭ್ಯಾಸ, ಅಪಾರ ಪರಿಶ್ರಮ ಮತ್ತು ಗೆಲುವಿನ ಛಲದಿಂದ ಜಿಲ್ಲಾ ಮಟ್ಟದಲ್ಲಿ ಹ್ಯಾಟ್ರಿಕ್ ಚಾಂಪಿಯನ್ ಆಗಲು ಸಾಧ್ಯವಾಗಿದೆ. ಇದೇ ಸಾಧನೆ ವಿಭಾಗ ಮಟ್ಟದಲ್ಲೂ ಮುಂದುವರಿಯುವ ವಿಶ್ವಾಸವಿದೆ ಎಂದು ಹೇಳಿದರು.






