ವಾಡಿ | ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾನೂನು ಜಾರಿಯಾಗಲಿ : ಡಾ.ಜಯದೇವಿ ಗಾಯಕವಾಡ

ವಾಡಿ: ಅನ್ಯ ಜಾತಿಯವರನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಸ್ವಂತ ಮಕ್ಕಳನ್ನೇ ಹತ್ಯೆ ಮಾಡುವ ಕ್ರೂರ ಸಂಸ್ಕೃತಿ ದೇಶದಲ್ಲಿ ಹೆಚ್ಚುತ್ತಿದೆ. ಇಂತಹ ಮರ್ಯಾದೆಗೇಡು ಹತ್ಯೆಗಳನ್ನು ತಡೆಗಟ್ಟಲು ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಸ್ತ್ರೀವಾದಿ ಚಿಂತಕಿ ಹಾಗೂ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಜಯದೇವಿ ಗಾಯಕವಾಡ ಒತ್ತಾಯಿಸಿದರು.
ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಪಟ್ಟಣದ ಸೇಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ "ಮರ್ಯಾದೆಗೇಡು ಹತ್ಯೆ ಹಿಂದಿನ ಮನುವಾದ ಹುಡುಕುತ್ತಾ..." ಎಂಬ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮರ್ಯಾದೆಯ ಹೆಸರಿನಲ್ಲಿ ಮಕ್ಕಳನ್ನು ಕೊಲೆ ಮಾಡುವ ಅಪರಾಧಿಗಳಿಗೆ ವಿಧಿಸುವ ಶಿಕ್ಷೆ ಇತರರಿಗೆ ಪಾಠವಾಗುವಂತಿರಬೇಕು. ಸ್ವಂತ ಕರುಳ ಕುಡಿಯನ್ನೇ ಕತ್ತರಿಸುವ ಹಂತಕ್ಕೆ ತಲುಪಿರುವ ಜಾತಿವಾದಿಗಳಿಂದ ದೇಶದ ಸಂಸ್ಕಾರ ಅವನತಿಯತ್ತ ಸಾಗುತ್ತಿದೆ. ಸಮಾನತೆಯ ಹರಿಕಾರ ಬಸವಣ್ಣನವರ ವಾರಸುದಾರರು ಎಂದು ಹೇಳಿಕೊಳ್ಳುವ ಎಷ್ಟು ಜನರು ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸಿದ್ದಾರೆ? ಎಂದು ಅವರು ಪ್ರಶ್ನಿಸಿದರು.
ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ನಡೆಯುವವರ ಸಂಖ್ಯೆಗಿಂತ ಅವರ ಬದ್ಧತೆ ಮುಖ್ಯ. ಜಾತಿ ನಿರ್ಮೂಲನೆಗೆ ಸಾಮಾಜಿಕ ಹೋರಾಟದಷ್ಟೇ ಕಠಿಣ ಕಾನೂನಿನ ಅಗತ್ಯವೂ ಇದೆ. ಸರ್ಕಾರಗಳು ಅಧಿಕಾರಕ್ಕಾಗಿ ಜಾತಿ ರಾಜಕೀಯ ಮಾಡುತ್ತಿರುವಾಗ, ಪ್ರಜ್ಞಾವಂತ ನಾಗರಿಕರು ಮೌನ ಮುರಿದು ಪ್ರತಿರೋಧ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಕಾಶಿನಾಥ ಧನ್ನಿ ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ-ಯುವತಿಗೆ ತಮ್ಮ ಜೀವನದ ನಿರ್ಧಾರ ತೆಗೆದುಕೊಳ್ಳುವ ಸಾಂವಿಧಾನಿಕ ಸ್ವಾತಂತ್ರ್ಯವಿದೆ. ಹುಸಿ ಮರ್ಯಾದೆಗಾಗಿ ಸ್ವಂತ ಮಗಳು ಅಥವಾ ಸಹೋದರಿಯನ್ನೇ ಹತ್ಯೆ ಮಾಡುವ ಘೃಣಿತ ಕೃತ್ಯಗಳನ್ನು ಸಮಾಜ ಒಕ್ಕೊರಲಿನಿಂದ ಖಂಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ನಿಕಟಪೂರ್ವ ಅಧ್ಯಕ್ಷ ಖೇಮಲಿಂಗ ಬೀಳಮಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಸ್ಟರ್ ಗ್ರೇಸಿ, ಉಪನ್ಯಾಸಕಿ ಯಶೋಧಾ ಪವಾರ, ಸಂಚಲನ ವೇದಿಕೆಯ ಅಧ್ಯಕ್ಷ ಶ್ರಾವಣಕುಮಾರ ಮೋಸಲಗಿ ಹಾಗೂ ದೇವಿಂದ್ರ ಕರದಳ್ಳಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಪ್ರಮುಖರಾದ ಹರಿಶ್ಚಂದ್ರ ಕರಣಿಕ, ರಾಯಪ್ಪ ಕೊಟಗಾರ, ಮಡಿವಾಳಪ್ಪ ಹೇರೂರ ಸೇರಿದಂತೆ ಅನೇಕ ಚಿಂತಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ದಯಾನಂದ ಖಜೂರಿ ಸ್ವಾಗತಿಸಿದರು, ರವಿ ಕೋಳಕೂರ ನಿರೂಪಿಸಿದರು ಮತ್ತು ಸಿದ್ದಯ್ಯಶಾಸ್ತ್ರೀ ನಂದೂರಮಠ ವಂದಿಸಿದರು.







