ವಾಡಿ | ಸಂವಿಧಾನದಿಂದ ದೇಶದಲ್ಲಿ ಸೌಹಾರ್ದತೆ ನೆಲೆಸಿದೆ: ತಿರುಮಲೇಶ.ಕೆ

ವಾಡಿ : ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಮುಂದಾಲೋಚನೆಯಲ್ಲಿ ರೂಪುಗೊಂಡಿರುವ ಭಾರತೀಯ ಸಂವಿಧಾನದಿಂದಲೇ ದೇಶದಲ್ಲಿ ಸೌಹಾರ್ದತೆ ನೆಲೆಸಲು ಸಾಧ್ಯವಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ತಿರುಮಲೇಶ.ಕೆ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸಂಜೆ ಸಿದ್ದಾರ್ಥ ತರುಣ್ ಸಂಘದ ವತಿಯಿಂದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ನೃತ್ಯ ಹಾಗೂ ಪ್ರಬಂಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೂ, 1950ರ ಜನವರಿ 26ರಂದು ಸಂವಿಧಾನ ಜಾರಿಯಾದ ಬಳಿಕವೇ ಭಾರತ ನಿಜಾರ್ಥದಲ್ಲಿ ಗಣರಾಜ್ಯವಾಯಿತು. ಆ ದಿನದಿಂದಲೇ ದೇಶದಲ್ಲಿ ಪ್ರಜೆಗಳ ಸರ್ಕಾರ ಜಾರಿಗೆ ಬಂದಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಶರಣಬಸ್ಸು ಸಿರೂರಕರ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಂತ ಅಗತ್ಯವಾಗಿವೆ. ಇಂತಹ ಚಟುವಟಿಕೆಗಳನ್ನು ಕಳೆದ ಎರಡು-ಮೂರು ದಶಕಗಳಿಂದ ನಿರಂತರವಾಗಿ ಆಯೋಜಿಸುತ್ತಿರುವ ಸಿದ್ದಾರ್ಥ ತರುಣ್ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಂತೆಯ ಸಂಘಸೇವಕ ಸಾನಿಧ್ಯ ವಹಿಸಿದ್ದರು. ಬೌದ್ಧ ಸಮಾಜದ ಉಪಾಧ್ಯಕ್ಷ ಮಲ್ಲೇಶಿ ಚುಕ್ಕೇರ ಅಧ್ಯಕ್ಷತೆ ವಹಿಸಿದ್ದರು. ಜೆಸ್ಕಾಂ ಸಹಾಯಕ ಅಧಿಕಾರಿ ರಾಜಕುಮಾರ ಬಿರಾದಾರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಪೌರ ನೌಕರರ ಸಂಘದ ಅಧ್ಯಕ್ಷ ಶಿವಾನಂದ ನಿಂಬರ್ಗಾ, ಕಸಾಪ ನಿಕಟಪೂರ್ವ ಅಧ್ಯಕ್ಷ ಖೇಮಲಿಂಗ ಬೆಳಮಗಿ, ತಾಯಪ್ಪ, ಅಬ್ದುಲ್ ಖಧೀರ್, ಸೈಯದ್ ಜಿಲಾನಿ, ಮಲ್ಲಯ್ಯ ಗುತ್ತೇದಾರ್, ಚಂದಪ್ಪ ಕಟ್ಟಿಮನಿ, ದೊಡ್ಡೇಶ ಬೆಳಿಗ್ಗೇರ, ಭೀಮ ನಾಟೇಕರ, ಗೊಲ್ಲಾಳಪ್ಪ ಬಡಿಗೇರ, ಮಹಾದೇವ ಮಾಲಗತ್ತಿ, ಭೀಮಶಾ ಮೈನಾಳಕರ, ರಮೇಶ್ ಬಡಿಗೇರ, ಅಮೃತ ಕೋಮಟೆ, ಶೇಖಪ್ಪ ಹೇರೂರ, ಗುರುಪಾದ ದೊಡ್ಡಮನಿ, ಪರಶುರಾಮ ಗಾಯಕವಾಡ, ಶರಣು ಮರೆತೂರ, ರಾಘವೇಂದ್ರ ಕೂಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತರುಣ ಸಂಘದ ಅಧ್ಯಕ್ಷ ದಿಲೀಪ ಮೈನಾಳಕರ, ಮಹೇಶ್ ರಾಜಳ್ಳಿ, ಅರ್ಜುನ ಮರತೂರ, ವಿಶಾಲ ಬಡಿಗೇರ, ಕಲ್ಯಾಣಿ, ಸುಶೀಲ ಕೋಬಾಳಕರ ಸೇರಿದಂತೆ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂತೋಷ ಕೋಮಟೆ ಸ್ವಾಗತಿಸಿದರು, ಸೂರ್ಯಕಾಂತ ರದ್ದೇವಾಡಿ ನಿರೂಪಿಸಿದರು, ಮರಲಿಂಗ ಮಾಲಗತ್ತಿ ವಂದಿಸಿದರು.
ನೃತ್ಯ ಸ್ಪರ್ಧೆಯಲ್ಲಿ ಗಂಗಾಮಾತಾ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ. ಡಾ. ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ ಮಿನಿ ರೋಸ್ ಆಂಧ್ರ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು.







