ವಾಡಿ | ಯೇಸುವಿನ ಸಂದೇಶ ಸತ್ಯ, ಕರುಣೆಯ ಮೇಲೆ ಕೇಂದ್ರೀಕೃತ : ಡಾ.ರಾಬರ್ಟ್ ಮೈಕೆಲ್ ಮಿರಾಂಡಾ

ವಾಡಿ: ಯೇಸು ಕ್ರಿಸ್ತನ ಸಂದೇಶವು ಪ್ರೀತಿ, ಕ್ಷಮೆ, ಕರುಣೆ ಹಾಗೂ ಸತ್ಯದ ಮೌಲ್ಯಗಳ ಮೇಲೆ ಕೇಂದ್ರೀಕೃತವಾಗಿದೆ ಎಂದು ಕಲಬುರಗಿ ಕ್ರೈಸ್ತಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ. ರಾಬರ್ಟ್ ಮೈಕೆಲ್ ಮಿರಾಂಡಾ ಹೇಳಿದರು.
ಪಟ್ಟಣದ ಕ್ಯಾಥೋಲಿಕ್ ಚರ್ಚ್ ಆವರಣದಲ್ಲಿರುವ ಸಂತ ಅನ್ನಮ್ಮನವರ ನವೀಕೃತ ದೇವಾಲಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್ ಅವರ ಹಬ್ಬದ ದಿನವೇ ದೇವಾಲಯ ಲೋಕಾರ್ಪಣೆಗೊಂಡಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಯೇಸು ಕ್ರಿಸ್ತನ ತಾಯಿ ಪವಿತ್ರ ಕನ್ಯಾ ಮರಿಯಮ್ಮನ ತಾಯಿ ಹಾಗೂ ಯೇಸು ಕ್ರಿಸ್ತನ ಅಜ್ಜಿಯಾಗಿರುವ ಸಂತ ಅನ್ನಮ್ಮ ಅವರು ತಾಯಂದಿರು, ಗರ್ಭಿಣಿಯರು, ಅಜ್ಜ-ಅಜ್ಜಿಯರು ಹಾಗೂ ಕುಟುಂಬಗಳ ರಕ್ಷಕ ಸಂತೆಯಾಗಿ ಗೌರವಿಸಲ್ಪಡುತ್ತಾರೆ ಎಂದು ತಿಳಿಸಿದರು.
ವಾಡಿ ಧರ್ಮಕೇಂದ್ರದ ಫಾದರ್ ರೋಶನ್ ಡಿಸೋಜಾ ಮಾತನಾಡಿ, ದೇವರನ್ನು ಪೂರ್ಣ ಹೃದಯದಿಂದ ಪ್ರೀತಿಸಬೇಕು. ನೆರೆಹೊರೆಯವರನ್ನು ಗೌರವಿಸಿ, ಬಡವರು, ದುರ್ಬಲರು ಹಾಗೂ ಸಂಕಷ್ಟದಲ್ಲಿರುವವರ ಮೇಲೆ ಕರುಣೆ ತೋರಬೇಕು. ಸತ್ಯ, ನ್ಯಾಯ ಮತ್ತು ವಿನಯದಿಂದ ಬದುಕುವುದೇ ಯೇಸು ಕ್ರಿಸ್ತನ ನಿಜವಾದ ಸಂದೇಶ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಧರ್ಮಗುರು ಫಾದರ್ ಸಂತೋಷ ಬಾಪು, ಪಾಲನಾ ಪರಿಷತ್ತಿನ ಸದಸ್ಯರಾದ ಆನಂದ ಬೋನಿ, ಸಿಸ್ಟರ್ ಗ್ರೇಸಿ, ಸಿರ್ಸ್ಟ ಜಯಾರಾಣಿ ವಸಂತಾ, ಸಿಸ್ಟರ್ ಅಮಲಾ, ಸಿಸ್ಟರ್ ಅನು, ನವೀನ್ ಯರಬೋಯಿ, ರಾಯಪ್ಪ ಯರಬೋಯಿ, ಆನಂದ ಯರ ಬೋಯಿ, ಜೋವೆಲ್ ಯರಬೋಯಿ, ತೆರೆಸಾ ಜಾನ್ ಯರಬೋಯಿ, ಅನಿತಾ ಪ್ರಸಾದ್, ಪ್ರಕಾಶ, ಬಾಲರಾಜ್, ರಾಬರ್ಟ್, ಸೈಮನ್ ಸೇರಿದಂತೆ ಶಹಾಬಾದ್, ಚಿತ್ತಾಪುರ, ಕಲಬುರಗಿ, ಸೇಡಂ, ಯಾದಗಿರಿ, ಬೀದರ್ ಹಾಗೂ ವಿವಿಧೆಡೆಯಿಂದ ನೂರಾರು ಜನ ಆಗಮಿಸಿದ್ದರು.






