ವಾಡಿ | ಸಚಿವ ಪ್ರಿಯಾಂಕ್ ಖರ್ಗೆ ಅವರ 48ನೇ ಹುಟ್ಟುಹಬ್ಬ: ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯ

ವಾಡಿ : ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವಾದರ್ಶಗಳ ಆಧಾರದಲ್ಲಿ ಪ್ರಾಮಾಣಿಕ ರಾಜಕಾರಣ ಮಾಡುತ್ತಿರುವ ಯುವ ನಾಯಕ ಪ್ರಿಯಾಂಕ್ ಖರ್ಗೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವಾನಂದ ಪಾಟೀಲ ಮರತೂರ ಹೇಳಿದರು.
ಪಿಎಂಕೆ ಫ್ಯಾನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ 48ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಹಿಡಿದು ಐಟಿ-ಬಿಟಿ ಹಾಗೂ ಗೃಹ ಇಲಾಖೆಯವರೆಗೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಹೊಸ ಬದಲಾವಣೆಗಳನ್ನು ತಂದಿದ್ದಾರೆ. ಅವರು ನೀಡಿದ ಕೊಡುಗೆಗಳನ್ನು ಇಂದು ಕ್ಷೇತ್ರದ ಪ್ರತಿಯೊಬ್ಬ ನಾಗರಿಕರೂ ಅನುಭವಿಸುತ್ತಿದ್ದಾರೆ ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯದಲ್ಲಿ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕರ್ತರನ್ನು ಬೆಳೆಸುವುದರ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಯೋಜನೆಗಳು ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಪ್ರತಿಯೊಬ್ಬರ ಅಭಿವೃದ್ಧಿಗೆ ಪೂರಕವಾಗಿವೆ. ಪ್ರಿಯಾಂಕ್ ಖರ್ಗೆ ಅವರು ಮತದಾರರ ಋಣ ತೀರಿಸುವ ಪ್ರಾಮಾಣಿಕ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯದ್ ಮಹೆಮೂದ್ ಚಿಸ್ತಿ ಮಾತನಾಡಿ, ದೇಶದ ಹಾಗೂ ಮಾನವ ಅಭಿವೃದ್ಧಿಯಲ್ಲಿ ಶಿಕ್ಷಣ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತದೆ. ಇದನ್ನು ಮನಗಂಡ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಮತಕ್ಷೇತ್ರ ಹಾಗೂ ಕಲಬುರಗಿ ಜಿಲ್ಲೆಗೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ತಂದು ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಿದ್ದಾರೆ ಎಂದರು.
ಪಟೇಲ್ ಮಂಚ್‌ನ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿರಾಜ್ ಪಟೇಲ್ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರು ಸಮ ಸಮಾಜ ನಿರ್ಮಾಣದ ಆಶಯ ಹೊಂದಿರುವ ಯುವ ರಾಜಕಾರಣಿಯಾಗಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲುವುದು ಹಾಗೂ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸುವುದು ಚಿತ್ತಾಪುರದ ಜನತೆಯ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ 12 ಮಹಿಳಾ ಸ್ವಸಹಾಯ ಗುಂಪುಗಳಿಗೆ ತಲಾ 10 ಸಾವಿರ ರೂ. ನಗದು ಸಹಾಯಧನ ವಿತರಿಸಲಾಯಿತು. ಅಲ್ಲದೆ, 28 ಮಹಿಳಾ ಪೌರಕಾರ್ಮಿಕರು ಹಾಗೂ 10 ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆಗಳನ್ನು ಉಡುಗೊರೆಯಾಗಿ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು.
ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಂಕ್ರಯ್ಯಸ್ವಾಮಿ ಮದ್ರಿ, ಮುಕ್ರುಮ್ ಪಟೇಲ, ಭೀಮುಗೌಡ ಹೊನಗುಂಟ, ತಿರುಮಲೇಶ ಕುಂಬಾರ, ಪೌರ ನೌಕರರ ಸಂಘದ ಅಧ್ಯಕ್ಷ ಶಿವಾನಂದ ನಿಂಬರ್ಗಾ, ಜಗದೀಶ ಶಿಂಧೆ, ಚಂದಪ್ಪ ಕಟ್ಟಿಮನಿ, ಮುಹಮ್ಮದ್ ಗೌಸ್, ಜುಮ್ಮಣ್ಣ ಪುಜಾರಿ, ಚಂದ್ರಸೇನ ಮೇನಗಾರ, ಭಗವಾನ ಚಾಮನೂರ, ಬಾಬುಮಿಯಾ, ನಾಗೇಂದ್ರ ಜಯಗಂಗಾ, ಬೈಲಪ್ಪ ಮೈನಾಳಕರ, ಮಲ್ಲಿಕಾರ್ಜುನ ಮಾಶಾಳ, ನಾಸೀರ ಹುಸೇನ್, ಮಲ್ಲೇಶಿ ಚುಕ್ಜೇರ, ಭೀಮಶಾ ಮೈನಾಳಕರ ಹಾಗೂ ಯುಸೂಫ್ ಪಟೇಲ ವೇದಿಕೆಯಲ್ಲಿದ್ದರು.
ಖೇಮಲಿಂಗ ಬೆಳಮಗಿ, ಭೀಮಾ ನಾಟೇಕರ, ರವಿಕುಮಾರ ಕೋಳಕೂರ, ಆನಂದಕುಮಾರ ನಿಂಬರ್ಗಾ, ಭೀಮರಾವ ನಿಂಬಾಳ, ಉಮರ್ ಪಟೇಲ, ಗುರುಪಾದ ದೊಡ್ಡಮನಿ, ಉದಯಕುಮಾರ ಯಾದಗಿರಿ, ಮಹೇಶ ರಾಜಳ್ಳಿ, ಅರ್ಜುನ ಮರತೂರ, ದಿಲೀಪ ಮೈನಾಳಕರ ಸೇರಿದಂತೆ ಹಲವರು ಭಾಗವಹಿಸಿದ್ದರು. ಹುಸನಪ್ಪ ನಿಲಾರ ಸ್ವಾಗತಿಸಿದರು. ಪಿಎಂಕೆ ಫ್ಯಾನ್ಸ್ ಕ್ಲಬ್ ಅಧ್ಯಕ್ಷ ಸೂರ್ಯಕಾಂತ ರದ್ದೇವಾಡಿ ನಿರೂಪಿಸಿದರು. ಶೇಖಪ್ಪ ಹೆರೂರ ವಂದಿಸಿದರು.






