ವಾಡಿ | ಖರ್ಗೆ ರ‍್ಯಾಲಿ ನಡೆಸಿದ 'ಸ್ಥಳ ಶುದ್ಧೀಕರಣ' : ಕ್ರಮಕ್ಕೆ ಸಿರೂರಕರ್ ಆಗ್ರಹ

ವಾಡಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಗೋಮೂತ್ರ, ಗಂಜಲ ಸಿಂಪಡಿಸಿ ಹೋಮ-ಹವನದ ಮೂಲಕ ‘ಶುದ್ಧೀಕರಣ’ ನಡೆಸಿರುವುದು ಖಂಡನೀಯ. ಇದು ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ವಾಡಿ ಬೌದ್ಧ ಸಮಾಜದ ಸಹ ಕಾರ್ಯದರ್ಶಿ ಶರಣಬಸು ಸಿರೂರಕರ್ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಆ.8ರಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಖರ್ಗೆ ಭಾಗವಹಿಸಿದ್ದರು. ಸಮಾವೇಶದ ಬಳಿಕ ವೇದಿಕೆ ಹಾಗೂ ಸ್ಥಳವನ್ನು ಶ್ರೀರಾಮ ಸೇನೆ ಕಾರ್ಯಕರ್ತರು ‘ಶುದ್ಧೀಕರಣ’ದ ಹೆಸರಿನಲ್ಲಿ ಗೋಮೂತ್ರ ಹಾಗೂ ಗಂಜಲ ಸಿಂಪಡಿಸಿ, ಹೋಮ-ಹವನ ನಡೆಸಿರುವುದು ಜಾತೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಆರೋಪಿಸಿದರು.
ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಜಾತಿ ನಿಂದನೆ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಜಾತೀಯತೆ ಹಾಗೂ ಸಾಮಾಜಿಕ ಅಸಮಾನತೆಯನ್ನು ಪ್ರೋತ್ಸಾಹಿಸುವ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಅವರು ಈ ಘಟನೆ ಕುರಿತು ಯಾವುದೇ ಹೇಳಿಕೆ ನೀಡದಿರುವುದು ವಿಷಾದನೀಯ. ಜಾತೀಯತೆಯಂತಹ ಗಂಭೀರ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಮೌನ ವಹಿಸಿರುವುದು ಇಂತಹ ಮನೋಭಾವಗಳಿಗೆ ಪರೋಕ್ಷವಾಗಿ ಉತ್ತೇಜನ ನೀಡಿದಂತಾಗಿದೆ ಎಂದು ಸಿರೂರಕರ್ ಹೇಳಿದರು.
ಐದು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನ ಹಾಗೂ ರಾಜಕಾರಣದಲ್ಲಿ ಸಕ್ರಿಯರಾಗಿರುವ ಖರ್ಗೆ ಅವರು ದಲಿತ ಸಮುದಾಯದಲ್ಲಿ ಜನಿಸಿದ್ದಾರೆ ಎಂಬ ಕಾರಣಕ್ಕೆ ಅವಮಾನಿಸುವ ರೀತಿಯ ಕೃತ್ಯ ಎಸಗಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.






