ವಾಡಿ | ಬಿಜೆಪಿ ಎಸ್‌ಸಿ ಮೋರ್ಚಾದ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ ನಿಧನ

ವಾಡಿ: ಭಾರತೀಯ ಜನತಾ ಪಕ್ಷದ ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ಹಾಗೂ ವಾಡಿ ಮಾದಿಗ ಸಮಾಜದ ಅಧ್ಯಕ್ಷ ರಾಜು ಮುಕ್ಕಣ್ಣ (56) ಅವರು ಅನಾರೋಗ್ಯದಿಂದ ಶನಿವಾರ ಸಂಜೆ ನಿಧನರಾದರು.
ರಾಜು ಮುಕ್ಕಣ್ಣ ಅವರು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿ ಹಲವು ಹೋರಾಟಗಳಿಗೆ ನೇತೃತ್ವ ವಹಿಸಿದ್ದರು. ಬಳಿಕ ಬಿಜೆಪಿ ಸೇರಿ ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ, ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ಇತ್ತೀಚೆಗೆ ವಾಡಿ ಮಾದಿಗ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರು ಪತ್ನಿ, ಒಬ್ಬ ಪುತ್ರ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕುಟುಂಬದವರ ಮಾಹಿತಿ ಪ್ರಕಾರ, ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 3 ಗಂಟೆಗೆ ವಾಡಿ ಪಟ್ಟಣದ ಜಾಂಬವೀರ ರುದ್ರಭೂಮಿಯಲ್ಲಿ ನಡೆಯಲಿದೆ.
ಪ್ರಿಯಾಂಕ್ ಖರ್ಗೆ ಸಂತಾಪ :
ರಾಜು ಮುಕ್ಕಣ್ಣ ಅವರ ನಿಧನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ ಸೂಚಿಸಿದ್ದು, ಅವರ ಅಗಲಿಕೆಯಿಂದ ಮಾದಿಗ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.




