ವಾಡಿ | ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಮೃತ್ಯು ಪ್ರಕರಣ : ಪರಿಹಾರಕ್ಕಾಗಿ ಪಟ್ಟು ಹಿಡಿದು ಕುಳಿತ ಸ್ಥಳೀಯರು

ವಾಡಿ : ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಪಂ ವ್ಯಾಪ್ತಿಯ ಕೊಂಚೂರು ಡಿಗ್ಗಿ ತಾಂಡಾದಲ್ಲಿ ರೈಲ್ವೆ ಕಾಮಗಾರಿಗಾಗಿ ತೋಡಿದ್ದ ಹೊಂಡಕ್ಕೆ ಬಿದ್ದು 13 ವರ್ಷದ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮೃತ ಬಾಲಕನನ್ನು ರಿತೇಶ್ (6ನೇ ತರಗತಿ) ಎಂದು ಗುರುತಿಸಲಾಗಿದೆ. ತಾಂಡಾದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ರೈಲ್ವೆ ಹಳಿ ಪಕ್ಕ ಮಣ್ಣು ತೆಗೆದು ಬಿಟ್ಟಿದ್ದ ಹೊಂಡದಲ್ಲಿ ಮಳೆ ನೀರು ನಿಂತಿತ್ತು. ಬೇಸಿಗೆ ಬಿಸಿಲಿನ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ರಿತೇಶ್ ಮೊದಲು ಮೊಳಕಾಲಿನಷ್ಟು ನೀರಿಗೆ ಇಳಿದಿದ್ದರೂ, ಆಳದ ಕಡೆಗೆ ಸಾಗಿದ ಪರಿಣಾಮ ಮೇಲೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳದಲ್ಲಿದ್ದ ಮಕ್ಕಳು ಮಾಹಿತಿ ನೀಡುತ್ತಿದ್ದಂತೆ ಸ್ಥಳೀಯರು ಧಾವಿಸಿ ಹೊರತೆಗೆದರೂ, ಅಷ್ಟರಲ್ಲೇ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.
ಘಟನೆಯ ಬಳಿಕ ಆಕ್ರೋಶಗೊಂಡ ಗ್ರಾಮಸ್ಥರು ಮೃತದೇಹವನ್ನು ಸುಮಾರು 7 ಗಂಟೆಗಳ ಕಾಲ ತಾಂಡಾದಲ್ಲೇ ಇಟ್ಟು ಪ್ರತಿಭಟನೆ ನಡೆಸಿದರು. ಕುಟುಂಬಕ್ಕೆ ತಕ್ಷಣ ಪರಿಹಾರ ಘೋಷಣೆ ಮಾಡಬೇಕು ಹಾಗೂ ನಿಯಮ ಉಲ್ಲಂಘಿಸಿ ಹೊಂಡ ತೋಡಿದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಸಿಪಿಐ ಎಸ್.ಬಿ. ಪಾಟೀಲ ಮನವೊಲಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಸಚಿವರೊಂದಿಗೆ ಮಾತನಾಡಿ ಪರಿಹಾರ ಒದಗಿಸುವ ಭರವಸೆ ನೀಡಿದರೂ ಗ್ರಾಮಸ್ಥರು ಶವದ ಅಂತ್ಯಕ್ರಿಯೆಗೆ ಒಪ್ಪದೇ ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಣಿಕಂಠ ರಾಠೋಡ ಅವರು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿ, ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೂ ನಡುವೆ ಆಂದೋಲ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ತಾಲೂಕಿನಲ್ಲಿ ಇಂತಹ ಹೊಂಡಗಳಿಗೆ ತಂತಿ ಬೇಲಿ ಹಾಕುವಂತೆ ಹಾಗೂ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಲು ಬಂದ ದಿವ್ಯಾ ಹಾಗರಗಿ ಅವರನ್ನು ಕಾನೂನು ಸುವ್ಯವಸ್ಥೆ ಹಿನ್ನಲೆಯಲ್ಲಿ ಪೊಲೀಸರು ತಾಂಡಾದೊಳಗೆ ಪ್ರವೇಶಿಸಲು ನಿರ್ಬಂಧಿಸಿದರು. ಈ ವೇಳೆ ಪೊಲೀಸರು ಮತ್ತು ಅವರ ನಡುವೆ ವಾಗ್ವಾದವೂ ನಡೆಯಿತು.
ಈ ಸಂಬಂಧ ವಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ.






