ವಾಡಿ | ಅತ್ಯುತ್ತಮ ನಾಗರೀಕರನ್ನು ಸೃಷ್ಠಿಸುವ ಶಕ್ತಿ ಶಿಕ್ಷಕರಿಗಿದೆ : ಸಾಹೇಬ್
27 ಶಿಕ್ಷಕರಿಗೆ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ಪ್ರದಾನ

ವಾಡಿ, ಸೆ.21: ದೇಶದ ಅತ್ಯುತ್ತಮ ನಾಗರಿಕರನ್ನು ರೂಪಿಸುವ ಶಕ್ತಿ ಶಿಕ್ಷಕರಿಗಷ್ಟೇ ಇದೆ ಎಂದು ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯದ್ ಮೆಹಮೂದ್ ಚಿಸ್ತಿ ಸಾಹೇಬ್ ಹೇಳಿದರು.
ಪಟ್ಟಣದ ಸಿದ್ದಾರ್ಥ ಭವನದಲ್ಲಿ ಪಿಎಂಕೆ ಫ್ಯಾನ್ಸ್ ಕ್ಲಬ್ ವತಿಯಿಂದ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ವಿದ್ಯಾರ್ಥಿಗಳು ಸದಾ ಗೌರವ ನೀಡಬೇಕು. ಮಕ್ಕಳ ಮಾತುಗಳನ್ನು ಮಾತ್ರ ಕೇಳಿ ಶಿಕ್ಷಕರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಪೋಷಕರು ಇಳಿಯಬಾರದು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬುದು ಸತ್ಯ. ಆದರೆ ನ್ಯಾಯ, ಸಮಾನತೆ, ಪರಸ್ಪರ ಪ್ರೀತಿ, ಮೈತ್ರಿ ಮತ್ತು ಸ್ವತಂತ್ರ ಬದುಕಿನ ಮೌಲ್ಯಗಳನ್ನು ಬೆಳೆಸುವಲ್ಲಿ ಶಾಲೆ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ತಾಯಿ ಮಗುವಿಗೆ ವಿದ್ಯಾವಂತನಾಗು ಎಂದು ಹೇಳಿದರೆ, ಶಿಕ್ಷಕರು ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸುತ್ತಾರೆ. ಉತ್ತಮ ಪ್ರಜೆಯನ್ನು ರೂಪಿಸುವ ಶಕ್ತಿ ಶಿಕ್ಷಕರಿಗಿದ್ದು, ಅದಕ್ಕೆ ಪೂರಕ ವಾತಾವರಣವನ್ನು ಪೋಷಕರು ನಿರ್ಮಿಸುತ್ತಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ 27 ಮಂದಿ ಶಿಕ್ಷಕರಿಗೆ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಮಹಾತ್ಮ ಗಾಂಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶೇಖ್ ಅನ್ವರ್, ಮುಖಂಡರಾದ ಬಾಬು ಮಿಯಾ, ಚಂದ್ರಸೇನ ಮೇನಗಾರ, ಮಾತನಾಡಿದರು.
ಪಿಎಸ್ಐ ತಿರುಮಲೇಶ ಕುಂಬಾರ, ಎಸಿಸಿ ಕಾರ್ಮಿಕ ಸಂಘದ ಅಧ್ಯಕ್ಷ, ಶರಣಬಸ್ಸು ಸಿರೂರಕರ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯ ಸ್ವಾಮಿ ಮದ್ರಿ, ಪತ್ರಕರ್ತರಾದ ದಯಾನಂದ ಖಜೂರಿ, ಇಂಗಳಗಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮುಕ್ರುಮ್ ಪಟೇಲ್, ಗಂಗಾ ಮಾತೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಇಂದಿರಾ ಜಿ.ಕೆ, ಸುಶೀಲಾ ಜಾಧವ, ಖೇಮಲಿಂಗ ಬೆಳಮಗಿ, ಗುರುಪಾದ ದೊಡ್ಡಮನಿ, ಸಂದೀಪ ಜೋಗೂರ, ಭೀಮರಾವ ನಿಂಬಾಳಕರ, ಹುಸನಪ್ಪ ನಿಲಾರ, ಶಶಿಕುಮಾರ ಅರೋಲಿಕರ, ಕಿರಣ ರಾಜನಾಳ ಸೇರಿದಂತೆ ಹಲವರಿದ್ದರು.
ಶೇಕಪ್ಪ ಹೇರೂರ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ರವಿಕುಮಾರ ಕೋಳಕೂರ ಪ್ರಾಸ್ತಾವಿಕ ನಿಡಿಗಳನ್ನಾಡಿದರು. ಫ್ಯಾನ್ಸ್ ಕ್ಲಬ್‌ನ ಅಧ್ಯಕ್ಷ ಸೂರ್ಯಕಾಂತ ರದ್ದೇವಾಡಿ ನಿರೂಪಿಸಿದರು. ಆನಂದ ನಿಂಬರ್ಗಾ ವಂದಿಸಿದರು.






