ವಾಡಿ | ಸೌಹಾರ್ದದ ಉರೂಸ್, ಜಾತ್ರಾ ಸಂಭ್ರಮ : ಗಂಧ ಮೆರವಣಿಗೆಗೆ ಭಕ್ತರ ಮಹಾಸಾಗರ

ವಾಡಿ : ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಲಾಡ್ಲಾಪುರ ಗ್ರಾಮದ ಪ್ರಸಿದ್ಧ ಹಾಜಿಸರ್ವರ್ (ಆದಿಶರಣ) ಜಾತ್ರೆಯ ಅಂಗವಾಗಿ ಗುರುವಾರ ರಾತ್ರಿ ಜರುಗಿದ ಗಂಧದ ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು.
ಜಾತ್ರೆಯ ಪ್ರಮುಖ ಆಕರ್ಷಣೆಯಾದ ಗಂಧೋತ್ಸವ ಮೆರವಣಿಗೆ ರಾತ್ರಿ 11 ಗಂಟೆಗೆ ಆರಂಭಗೊಂಡು ಶುಕ್ರವಾರ ಬೆಳಿಗ್ಗೆ 5 ಗಂಟೆಯವರೆಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಭಕ್ತರು “ಹಾಜಿಸರ್ವರ್ ಕೀ ದೋಸ್ತಾರ ಹೋದ್ದಿನ್” ಎಂಬ ಜಯಘೋಷಗಳನ್ನು ಮೊಳಗಿಸಿದರು.
ಪೂಜಾರಿಗಳ ಮನೆಯಿಂದ ಗಂಧ ಲೇಪಿತ ಕಳಸಗಳನ್ನು ತಂದು ಗ್ರಾಮದ ನಡುಗಡ್ಡೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಬಳಿಕ ಹಿಂದೂ ಪೂಜಾರಿಗಳು ಹಾಗೂ ಮುಸ್ಲಿಂ ಮೌಲ್ವಿಗಳು ತಮ್ಮ ತಮ್ಮ ಧರ್ಮಾನುಸಾರ ಪೂಜೆ ಸಲ್ಲಿಸಿದರು. ವಾದ್ಯಮೇಳಗಳೊಂದಿಗೆ ಬಂದ ಭಕ್ತರು ಪುಷ್ಪ, ಛತ್ರಿ, ಚಾಮರ ಹಾಗೂ ಬೆಳ್ಳಿ ಕುದುರೆಗಳನ್ನು ಪಂಚಕಳಸಗಳಿಗೆ ಅರ್ಪಿಸಿದರು. ಹೂಗಾರರು ಮತ್ತು ಮುಸ್ಲಿಂ ಸಮುದಾಯದವರು ಸೇರಿ ಭಕ್ತರ ಹರಕೆಯನ್ನು ಸ್ವೀಕರಿಸಿದರು.
ರಾತ್ರಿ ಗಂಧದ ಮೆರವಣಿಗೆಗೆ ಭಕ್ತರು ದೀಪದ ಎಣ್ಣೆ ಸುರಿದು ಬೆಳಕು ನೀಡಿದರು. ಬಳಿಕ ಮುಸ್ಲಿಂರು ಧರ್ಮಪಠಣ ಮಾಡಿ ಪ್ರಾರ್ಥನೆ ಸಲ್ಲಿಸಿದ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪ್ರಮುಖ ಬೀದಿಗಳ ಮೂಲಕ ಸಾಗಿದ ಮೆರವಣಿಗೆ ಬೆಳಿಗ್ಗೆ ದರ್ಗಾ ತಲುಪಿತು.
ಶುಕ್ರವಾರ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಗುಡ್ಡದತ್ತ ಹರಿದುಬಂದರು. ಹಾಜಿಸರ್ವರ್ ದೇವರ ಕೃಪೆಗೆ ಪಾತ್ರರಾಗಲು ಹಿಂದೂ-ಮುಸ್ಲಿಂ ಸಮುದಾಯದವರು ವರ್ಷಗಳಿಂದ ಈ ಜಾತ್ರೆಯನ್ನು ಆಚರಿಸುತ್ತಿದ್ದು, ಇದು ಸೌಹಾರ್ದದ ಮಾದರಿ ಉತ್ಸವವಾಗಿದೆ.
ಟ್ರ್ಯಾಕ್ಟರ್ ಹಾಗೂ ಬೈಕ್‌ಗಳಲ್ಲಿ ಕುಟುಂಬ ಸಮೇತ ಬಂದ ಭಕ್ತರು ಸುಡುಬಿಸಿಲನ್ನೂ ಲೆಕ್ಕಿಸದೆ ಬರಿಗಾಲಲ್ಲಿ ಗುಡ್ಡ ಹತ್ತಿ ನೈವೇದ್ಯ ಸಮರ್ಪಿಸಿದರು. ಹಲವರು ಗುಡ್ಡದ ಸುತ್ತ ಬೀಡಾರ ಹಾಕಿ ಕುಟುಂಬ ಸಮೇತ ಉಳಿದುಕೊಂಡು ಸಾಮೂಹಿಕ ಭೋಜನ ಸವಿದರು. ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.







