ಆರೆಸ್ಸೆಸ್ ನೋಂದಣಿಯಿಲ್ಲದ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸುವ ಕುರಿತಾಗಿ ಪತ್ರ ಬರೆದಿದ್ದೆ, ಆದರೆ ಎಲ್ಲರೂ ಆರೆಸ್ಸೆಸ್ ಅನ್ನು ಹೇಗೆ ಬ್ಯಾನ್ ಮಾಡುತ್ತೀರಿ ನೋಡುತ್ತೇವೆ ಎನ್ನುತ್ತಿದ್ದಾರೆ. ನೋಂದಣಿಯೇ ಇಲ್ಲದ ಆರೆಸ್ಸೆಸ್ ಸಂಸ್ಥೆಯನ್ನು ನಿಷೇಧಿಸುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ?' ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಇಲ್ಲವೆಂದು ಆರೆಸ್ಸೆಸ್ ನವರೇ ಹೇಳುತ್ತಾರೆ. ಆದರೆ, ಸರ್ಕಾರದ ಆದೇಶ ಬಂದ ನಂತರ ಆರೆಸ್ಸೆಸ್ ಗಿಂತ ಬಿಜೆಪಿಯವರೇ ತಾವೇ ಮುಗಿದುಬಿದ್ದು ಮಾತಾಡುತ್ತಿದ್ದಾರೆ. ಬಿಜೆಪಿಗೂ ಆರೆಸ್ಸೆಸ್ ಗೂ ಏನು ಸಂಬಂಧ? ಎಂದು ಪ್ರಶ್ನೆ ಮಾಡಿದರು.
ನನಗೆ ಯಾಕೆ ಪ್ರಚಾರ? :
ನಾನು ಸರ್ಕಾರದಲ್ಲಿ ಸಚಿವನಾಗಿದ್ದೇನೆ ನನಗೆ ಯಾಕೆ ಪ್ರಚಾರ? ಒಬ್ಬ ಕರೆ ಮಾಡಿ ನನಗೆ ಜೀವ ಬೆದರಿಕೆ ಹಾಕಿದ್ದಾನೆ. ನನ್ನ ಕುಟುಂಬದವರನ್ನು ಕೂಡಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಬಿಜೆಪಿಯ ಯಾರೊಬ್ಬರೂ ಖಂಡಿಸಲಿಲ್ಲ. ಪೊಲೀಸರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಅವನನ್ನು ಅರೆಸ್ಟ್ ಮಾಡಿದ್ದಾರೆ. ನನಗೆ ಕರೆ ಮಾಡಿದ ವ್ಯಕ್ತಿ ತನ್ನ ಕಣಕಣದಲ್ಲಿಯೂ ಆರೆಸ್ಸೆಸ್ ಇದೆ ಎಂದಿದ್ದಾನೆ. ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ. ಅರೆಸ್ಟ್ ಆದ ವ್ಯಕ್ತಿ ಬಡ ಕುಟುಂಬದವನು. ಆತನನ್ನು ಪ್ರಚೋದಿಸಿದವರು ಯಾರು ಅವರಿಗೂ ಶಿಕ್ಷೆಯಾಗಬೇಕಲ್ಲವೇ? ಎಂದರು.
ಆರೆಸ್ಸೆಸ್ ನೋಂದಣಿಯಿಲ್ಲದ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನೆ:
ಅದೇ ದಿನದಂತೆ ಅಲ್ಲೇ ಪಥಸಂಚಲನ ಮಾಡುತ್ತೇವೆ ಎಂದು ಆರೆಸ್ಸೆಸ್ ಹೇಳಿದೆ. ಈ ಬಗ್ಗೆ ಕೆಲವು ಸಂಘಟನೆಗಳು ಕೂಡಾ ಅದೇ ದಿನ ಅಲ್ಲೇ ತಾವೂ ಪಥಸಂಚಲನ ಮಾಡುವುದಾಗಿ ಅರ್ಜಿ ಸಲ್ಲಿಸಿವೆ. ಅಲ್ಲಿಯೇ ಪಥಸಂಚಲನ ಮಾಡಬೇಕೆಂದು ಆರೆಸ್ಸೆಸ್ ಪ್ರತಿಷ್ಠೆಯನ್ನಾಗಿಸಿಕೊಂಡಿದೆ. ಸದ್ಯ ಈ ವಿಚಾರ ಹೈಕೋರ್ಟ್ ನಲ್ಲಿದೆ. ಹೈಕೋರ್ಟ್ ತಿರ್ಮಾನ ಏನು ಬರುತ್ತದೆಯೋ ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದರು.
ಆರೆಸ್ಸೆಸ್ ನೋಂದಣಿ ಪತ್ರದ ವಿಚಾರ ಕುರಿತಂತೆ ಹೈಕೋರ್ಟ್ ನಲ್ಲಿ ಸರಿಯಾದ ಸಮಯದಲ್ಲಿ ಪ್ರಶ್ನೆ ಮಾಡಲಾಗುವುದು. ಈಗ ಪಥಸಂಚಲನದ ವಿಚಾರ ಮಾತ್ರ ಬಂದಿದೆ. ಅನುಮತಿ ಸಿಕ್ಕರೆ ನೋಂದಣಿ ವಿಚಾರದಲ್ಲಿಯೂ ಕಾನೂನು ಪ್ರಕಾರ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮ ನಡೆಸದಂತೆ ಹೈಕೋರ್ಟ್ ಆದೇಶ ಇದೆ. ಆದರೆ, ಬೆಂಗಳೂರಿನಲ್ಲಿ ಆರೆಸ್ಸೆಸ್ ನವರು ಪೊಲೀಸರ ಅನುಮತಿ ಪಡೆಯದೆ ಕೇವಲ ಮಾಹಿತಿಗಾಗಿ ಎಂದು ಬರೆದಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಯಾರಾದರೂ ಸಾವಿರಾರು ಜನರು ಸೇರಬೇಕಾದರೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕೇ ಹೊರತು ಮಾಹಿತಿ ನೀಡುವಂತಿಲ್ಲ. ಆರೆಸ್ಸೆಸ್ ಇದನ್ನು ಅನುಸರಿಸುವುದಾದರೆ, ನಾವೂ ಅನುಸರಿಸುತ್ತೇವೆ ಎಂದು ಇತರರು ಪ್ರಶ್ನೆ ಮಾಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸೇಡಂನಲ್ಲಿ ಕಾನೂನು ಉಲ್ಲಂಘನೆ ಮಾಡಿ ಪಥ ಸಂಚಲನ ಮಾಡಿದ್ದಾರೆ. ಅದನ್ನು ಕೋರ್ಟ್ ಗಮನಕ್ಕೆ ತರಲಾಗುವುದು. ಅಂದಿನ ಶಾಂತಿ ಸಭೆಯಲ್ಲಿ ಆರೆಸ್ಸೆಸ್ ಬದಲು ಬಿಜೆಪಿಯವರಿಗೇನು ಕೆಲಸ? ಅಶೋಕ್ ಪಾಟೀಲ್ ಯಾಕೆ ಅಂದಿನ ಶಾಂತಿ ಸಭೆಗೆ ಹೋಗಿಲ್ಲ? ಅವರ ಬದಲು ಬಿಜೆಪಿಯವರು ಯಾಕೆ ಹೋಗಿದ್ದರು? ಅವರು ಶಾಂತಿ ಸಭೆಗೆ ಬಂದಿದ್ದರೋ ಅಥವಾ ಭಂಗ ಉಂಟು ಮಾಡಲು ಬಂದಿದ್ದರೋ? ಎಂದು ಪ್ರಶ್ನಿಸಿದರು.
ಆರೆಸ್ಸೆಸ್ ಪಥಸಂಚಲನ ವಿಚಾರದಲ್ಲಿ ಗೊಂದಲ ಸೃಷ್ಠಿಸುತ್ತಿರುವವರು ಯಾರು ? ಲಾಠಿ ಹಿಡಿಯುವ ವಿಚಾರದಲ್ಲಿ ಎಲ್ಲಾ ಕಡೆ ಏನೂ ತಕರಾರು ಇಲ್ಲ. ಚಿತ್ತಾಪುರದಲ್ಲಿ ಮಾತ್ರವೇ ಯಾಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿತ್ತಾಪುರದಲ್ಲಿ ಕಾನೂನು ಇದೆ. ಹಾಗೆ ಎಲ್ಲ ಕಡೆಯೂ ಇದೆ. ಆದರೆ ಚಿತ್ತಾಪುರ ಯುವಕರ ಭವಿಷ್ಯದ ಪ್ರಶ್ನೆ ಬಂದಾಗ ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ. ಈಗ ವಿಚಾರ ಹೈಕೋರ್ಟ್ ನಲ್ಲಿದೆ. ಲಾಠಿ ಹಿಡಿದುಕೊಂಡು ಪಥಸಂಚಲನ ನಡೆಸಲು ಅನುಮತಿ ನೀಡಿದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ್, ಮಾಜಿ ಸಚಿವ ರೇವುನಾಯಕ್ ಬೆಳಮಗಿ ಮತ್ತಿತ್ತರರು ಇದ್ದರು.







