ಧರ್ಮಸ್ಥಳ ಅಸಹಜ ಸಾವುಗಳ ಪ್ರಕರಣದ ಮುಖ್ಯ ಆರೋಪಿಗಳ ವಿರುದ್ಧ ಯಾಕೆ ವಿಚಾರಣೆ ಇಲ್ಲ: ನವೀನ್ ಸೂರಿಂಜೆ ಪ್ರಶ್ನೆ

ಕಲಬುರಗಿ: ಧರ್ಮಸ್ಥಳ ಪ್ರಕರಣದಲ್ಲಿ ಕೇವಲ ಹೋರಾಟಗಾರರು, ಯೂಟ್ಯೂಬರ್ ಗಳಿಗೇ ನೋಟಿಸ್ ಕೊಡುವುದು, ವಿಚಾರಣೆ ನಡೆಸುವುದು ಆಗುತ್ತಿದೆ. ಆದರೆ ಪ್ರಕರಣದ ಮುಖ್ಯ ಆರೋಪಿಗಳಿಗೆ ಯಾಕೆ ನೋಟಿಸ್ ಕೊಡುತ್ತಿಲ್ಲ, ಯಾಕೆ ವಿಚಾರಣೆಗೆ ಕರೆಯುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ನವೀನ್ ಸೂರಿಂಜೆ ಪ್ರಶ್ನಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ "ಧರ್ಮಸ್ಥಳದಲ್ಲಿ ನಡೆದಿದ್ದೇನು? ನ್ಯಾಯಕ್ಕಾಗಿ ನಾವು" ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಸಹಜ ಸಾವಿನ ಪ್ರಕರಣ ಸಂಬಂಧ ಪೊಲೀಸರು ಹೋರಾಟಗಾರರಿಗೆ, ಧರ್ಮಸ್ಥಳದ ಆರೋಪಿಗಳ ವಿರುದ್ಧ ಮಾತನಾಡುವವರಿಗೆ ಮಾತ್ರ ನೋಟಿಸ್ ಯಾಕೆ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಯಾರನ್ನು ಆರೋಪಿ ಎನ್ನುತ್ತಿದ್ದೇವೋ ಅವರಿಗೆ ಈವರೆಗೆ ಎಸ್ಐಟಿ ನೋಟಿಸ್ ಕೊಟ್ಟಿಲ್ಲ, ವಿಚಾರಣೆ ನಡೆಸಿಲ್ಲ. ಎಸ್ಐಟಿ ಮೇಲೆ ನಂಬಿಕೆ ಇದೆ, ಆದರೆ ಈ ತನಿಖಾ ತಂಡದ ಮೇಲೆ ಸರ್ಕಾರ ಹಾಗೂ ವಿರೋಧ ಪಕ್ಷಗಳು ಹಲವು ಒತ್ತಡ ಹಾಕುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
ಎಸ್ಐಟಿ ತಂಡವನ್ನು ಸ್ವತಂತ್ರವಾಗಿ ತನಿಖೆ ನಡೆಸಲು ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರಣವ್ ಮೊಹಂತಿ, ಅನುಚೇತ್, ದಯಾಮ್ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ, ಅಸಹಜ ಸಾವುಗಳ ಬಗ್ಗೆ ಸಮಗ್ರ ತನಿಖೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಸರ್ಕಾರ ಮಹೇಶ್ ಶೆಟ್ಟಿ ತಿಮರೋಡಿ, ಯೂಟ್ಯೂಬರ್ ಸಮೀರ್ ಎಂ.ಡಿ ಅವರನ್ನು ನಾಲ್ಕು ಬಾರಿ ವಿಚಾರಣೆ ಕರೆದು ದಿಕ್ಕು ತಪ್ಪಿಸುತ್ತಿದೆ. ಅಷ್ಟು ಬಾರಿ ಅವರನ್ನು ವಿಚಾರಣೆಗೆ ಕರೆಯುವಹಂತದ್ದು ಏನಿದೆ? ಧರ್ಮಸ್ಥಳ ಪರ ಹೋರಾಟ ಮಾಡುತ್ತಿರುವವರ ವಿರುದ್ಧ ಯಾಕೆ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ಧರ್ಮಸ್ಥಳದ ವಿರುದ್ಧವಾಗಿ ಮಾತನಾಡಿದ್ದಕ್ಕೆ ತಿಮರೋಡಿ ಅವರನ್ನು ಸರ್ಕಾರ ಗುರಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಧರ್ಮಸ್ಥಳದ ವಿರುದ್ಧ ಮಾತನಾಡುವ ಇಂತಹ ಕಾರ್ಯಕ್ರಮ ನಡೆಯಬಾರದೆಂದು ಪಿತೂರಿಗಳು ನಡೆದಿವೆ. ಕಲಬುರಗಿ ಪೊಲೀಸರು ನನಗೆ ನೋಟಿಸ್ ನೀಡಿದ್ದು, ನೀವು ಯಾವುದೇ ಕಾರಣಕ್ಕೂ ಧರ್ಮಸ್ಥಳ ವಿಷಯದ ಕುರಿತು ಮಾತನಾಡಬಾರದು ಎಂದು ಹೇಳಿದ್ದಾರೆ. ಆದರೆ ಪೊಲೀಸರು ನಮಗೆ ಕೊಟ್ಟಿರುವ ನೋಟಿಸ್ ಕಾನೂನು ಬಾಹಿರ ಎಂದು ಟೀಕಿಸಿದರು.
ಕೆ.ನೀಲಾ ಪ್ರಸ್ತಾವಿಕವಾಗಿ ಮಾತನಾಡಿ, ಹೆಣ್ಣು ಮಕ್ಕಳನ್ನು ಅತ್ಯಾಚಾರ, ಕೊಲೆ ಮಾಡಿ ನೇತ್ರಾವತಿ ನದಿಗೆ ಎಸೆದಿದ್ದಾರೆ. ವೇದವಲ್ಲಿ, ಪದ್ಮಲತಾ, ಸೌಜನ್ಯ, ಯಮುನಾ ಸೇರಿದಂತೆ ಅನೇಕ ಹೆಣ್ಣು ಮಕ್ಕಳ ಸಾವಿನ ಪ್ರಕರಣಗಳಿಗೆ ನ್ಯಾಯ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಧರ್ಮಸ್ಥಳದಲ್ಲಿ ಆಗಿರುವ ಕೊಲೆಗಳ ಬಗ್ಗೆ ನ್ಯಾಯ ಬೇಕು. ಇದಕ್ಕೆ ಸರ್ಕಾರ ಸ್ವತಂತ್ರ ತನಿಖೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಮಾತನಾಡಿ, ಸರ್ಕಾರ ಉಳ್ಳವರ ಪರವಾಗಿ ನಿಂತು ಎಸ್ಐಟಿ ತನಿಖೆಯ ದಿಕ್ಕು ತಪ್ಪಿಸುತ್ತಿದೆ. ಇವರಿಗೂ ನಡೆದಿರುವ ಅಸಹಜ ಸಾವಿನ ಪ್ರಕರಣಗಳಿಗೆ ನ್ಯಾಯ ಕೊಡಿಸಲೇಬೇಕು ಎಂದು ಒತ್ತಾಯಿಸಿದರು.
ಆರ್.ಕೆ ಹುಡಗಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅರ್ಜುನ್ ಭದ್ರೆ, ಶ್ರೀಮಂತ ಬಿರಾದಾರ, ಪದ್ಮಿನಿ ಕಿರಣಗಿ, ರೇಣುಕಾ ಸಿಂಗೆ, ಚಂದಮ್ಮ ಗೋಳಾ, ಕಾವ್ಯ ಸೂರಿಂಜೆ, ಲವಿತ್ರ ವಸ್ತ್ರದ್, ಸಲ್ಮಾನ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ಪದ್ಮಾವತಿ ಮಾಲಿಪಾಟೀಲ್ ಸ್ವಾಗತಿಸಿದರು. ಪ್ರಮೋದ್ ಪಾಂಚಾಳ ನಿರೂಪಿಸಿದರು.







