ದಲಿತ ಸಿಎಂ ಬಗ್ಗೆ ಗೊಂದಲ ಸೃಷ್ಟಿ ಯಾಕೆ: ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ ಸಾಹೇಬರನ್ನು ಪಾರ್ಲಿಮೆಂಟ್ ಎಲೆಕ್ಷನ್ ನಡೆದಾಗ ಪಿಎಂ ಮಾಡುತ್ತೀರಿ, ರಾಜ್ಯದಲ್ಲಿ ಏನಾದರೂ ಆದರೂ ಮುಖ್ಯಮಂತ್ರಿ ಮಾಡುತ್ತೀರಿ. ಅಂತಹ ಬೆಳವಣಿಗೆಗಳು ಯಾವುದು ಇಲ್ಲ ಎಂದು ಖರ್ಗೆ ಸಾಹೇಬರೇ ಹೇಳಿದ್ದಾರೆ. ಮತ್ತೆ ಯಾಕೆ ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ದಲಿತ ಸಿಎಂ ಕೂಗು ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ವಾಟ್ಸಾಪ್ ನಲ್ಲಿ ಏನು ಬಂದಿದೆ ಅದನ್ನು ನೋಡಿದರೆ ಹೀಗೆ ಆಗುತ್ತೆ, ಖರ್ಗೆ ಸಾಹೇಬರು ಹೇಳಿರುವ ಹೇಳಿಕೆ ಪೂರ್ತಿ ಕೇಳಿ ಎಂದರು.
ಧರ್ಮಸ್ಥಳದ ಎಸ್ಐಟಿ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತನಿಖೆ ಈಗತಾನೆ ಪ್ರಾರಂಭವಾಗಿದೆ. ಅನಾಮಿಕ ವ್ಯಕ್ತಿ ಎಸ್ಐಟಿ ತಂಡಕ್ಕೆ ನಿನ್ನೆ ಹದಿಮೂರು ಸ್ಥಳ ತೋರಿಸಿದ್ದಾರೆ. ಹೊಸ ಸಾಕ್ಷಿಗಳು ಬಂದರೂ ಸಹ ಈ ವಿಚಾರದಲ್ಲಿ ಸರ್ಕಾರ ಬಹಳ ಸ್ಪಷ್ಟವಾಗಿದೆ. ಯಾರೆ ಎಷ್ಟೇ ಪ್ರಭಾವಿಗಳಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರು ಕೇರಳ ಪ್ರಭಾವದಿಂದ ತನಿಖೆ ಮಾಡುತ್ತಿದ್ದಾರೆ ಎಂಬ ಹೇಳಿಕೆ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಅವರು ಈ ಹಿಂದೆ ಹೋಮ್ ಮಿನಿಸ್ಟರ್ ಆಗಿದ್ದವರೂ, ಅವರಿಗೆ ಕಾನೂನು ಗೊತ್ತಿಲ್ಲವಾ? ಅವರಿಗೆ ಎಫ್ಐಆರ್ ಆದರೆ ಏನು ಮಾಡಬೇಕಂತ ಗೊತ್ತಿಲ್ಲವಾ? ಎಂದು ಪ್ರಶ್ನಿಸಿದ ಅವರು, ಆರ್.ಅಶೋಕ್ ಅವರು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರಾಗಿ ಮಾತಾಡಬೇಕು. ಬಾಲೀಶತನದ ಹೇಳಿಕೆ ಕೊಡೊದನ್ನು ಬಿಡಬೇಕು ಎಂದರು.
ಖರ್ಗೆಯವರು ಅಸಹಾಯಕತೆಯಿಂದ ಹೇಳಿಕೆ ನೀಡಿರುವ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಅವರು ಪೂಜ್ಯ ಅಪ್ಪಾಜಿಯನ್ನು ಕಣ್ಣಿರಿಟ್ಟು ಕೇಳಗಿಳಿಸಿದ್ರಲ್ಲ ಅದರ ಬಗ್ಗೆ ಮಾತಾಡಲಿ. ಕಣ್ಣೀರು ಹಾಕಿ ಸ್ಟೇಜ್ ಇಂದ ಕೆಳಗೆ ಇಳಿದಿದ್ದು ಯಾಕೆ? ಈ ಬಾರಿ ಕೂಡ ಬೊಮ್ಮಾಯಿಯವರನ್ನು ಸಿಎಂ ಮಾಡಬೇಕಾದಾಗ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಣ್ಣಿರು ಹಾಕಿ ಇಳಿಸಿದ್ದಾರೆ. ಖರ್ಗೆ ಸಾಹೇಬರು ಯಾವತ್ತು ರಾಜಕೀಯ ಹುದ್ದೆಗಾಗಿ ಕಣ್ಣಿರು ಹಾಕಿಲ್ಲ, ಹಾಕೋದಿಲ್ಲ. ವಿಜಯೇಂದ್ರ ಅವರು ಇತಿಹಾಸ ನೋಡಲಿ , ಪೂಜ್ಯ ಅಪ್ಪಾಜಿ ಸಿಎಂ ಆದಾಗೆಲ್ಲಾ ಕಣ್ಣಿರು ಹಾಕಿದ್ದರು. ಕುಮಾರಸ್ವಾಮಿ ಅವರು ಅನ್ಯಾಯ ಮಾಡಿದ್ರು ಎಂದು ಕಣ್ಣಿರು ಹಾಕಿದ್ದರು ಎಂದು ತಿಳಿಸಿದರು.







