ಆಳಂದ ರಸ್ತೆ ಅಗಲೀಕರಣ: ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹ

ಆಳಂದ : ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣ ಕಾರ್ಯವು ಅಭಿವೃದ್ಧಿಯ ಸಂಕೇತವಾಗಬೇಕಿದ್ದರೂ, ಇಂದು ಜನರ ಬದುಕಿಗೆ ಭೀತಿಯ ಸಂಕೇತವಾಗಿ ಪರಿಣಮಿಸಿದೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಮನೆ, ಅಂಗಡಿ ಹಾಗೂ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಆಗ್ರಹಿಸಿದರು.
ಶನಿವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಅಗಲೀಕರಣದಿಂದ ನೂರಾರು ಕುಟುಂಬಗಳು ಮನೆ–ಮಠ ಕಳೆದುಕೊಂಡು ಬೀದಿಗೆ ಬೀಳುವ ಸ್ಥಿತಿಗೆ ತಲುಪಿವೆ. ಸಂತ್ರಸ್ತರ ಅಳಲು, ಆಡಳಿತದ ಮೌನ ಹಾಗೂ ರಾಜಕೀಯದ ಅಸ್ಪಷ್ಟತೆ ಆಳಂದವನ್ನು ಅಶಾಂತಿಯ ಅಂಚಿಗೆ ತಂದು ನಿಲ್ಲಿಸಿದೆ. ಆದರೆ ಈ ಜನರ ಕೂಗು ಸರ್ಕಾರದ ಕಿವಿಗೆ ಬೀಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪರಿಹಾರ ಕೊಡಲಾಗುವುದಿಲ್ಲ” ಎನ್ನುವ ಸರಳ ಉತ್ತರದ ಹಿಂದೆ ಯಾವ ಕಾನೂನು ಇದೆ? ಯಾವ ಸರ್ಕಾರದ ಆದೇಶ ಪತ್ರದ ಆಧಾರದಲ್ಲಿ ಜನರ ಮನೆ–ಅಂಗಡಿಗಳನ್ನು ಧ್ವಂಸಗೊಳಿಸಲಾಗುತ್ತಿದೆ? ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಆಡಳಿತವೇ ಹೊರತು ಬೀದಿಯಲ್ಲಿರುವ ಜನರಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು 59ಕ್ಕೂ ಹೆಚ್ಚು ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರಿರುವಾಗ, ನ್ಯಾಯಾಲಯದ ಆದೇಶಗಳನ್ನು ಕಡೆಗಣಿಸಿ ರಸ್ತೆ ಅಗಲೀಕರಣ ಕಾರ್ಯ ಮುಂದುವರಿಸುವುದು ಯಾವ ಪ್ರಜಾಪ್ರಭುತ್ವದ ಮಾದರಿ? ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ರಸ್ತೆ ಅಗಲೀಕರಣದಿಂದ ಆಸ್ತಿ ಕಳೆದುಕೊಂಡ ಪ್ರಣಯರಾಜ್ ಕಟಂಬಲೆ, ಸೂರಜ್ ಆಳಂದಕರ್, ವೀರಣ್ಣ ಮೇಲ್ಕೇರಿ, ಅಡವೀರಾಜ ಅತ್ನೂರೆ, ದತ್ತು ಕುಂಬಾರ, ಭರತ ಸಂಗಾ, ಸಿದ್ಧಾರೂಢ ಸ್ವಾಮಿ, ಕಿಶನ ರಂಗದಾಳ, ದಶರಥ ಬೋಸ್ಲೆ, ನಿತೀನ್ ಶಹಾ, ಅಮಿತಚಂದ ಶಹಾ, ಸಂಗಮೇಶ ಸಜ್ಜನ್, ಅಜೀತ ಶಹಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







