ಅಂಬೇಡ್ಕರ್ ರಿಂದ ಮಹಿಳೆಯರಿಗೆ ಸಮಾನತೆ ಸಿಕ್ಕಿದೆ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಚತುರ್ವರ್ಣ ಪದ್ಧತಿ ಹಾಗೂ ಮನಸ್ಮೃತಿ ಸಿದ್ಧಾಂತಗಳಿಂದ ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯಿಂದ ವಂಚಿತರಾಗಿದ್ದರು. ಅಂತಹ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿದವರು ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ, ಸಂವಿಧಾನ ಶಿಲ್ಪಿ ಅಂಬೇಡ್ಕರರು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ವೇಳೆ ನೂತನವಾಗಿ ನೇಮಕಗೊಂಡ 1,036 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.
ಮಹಿಳೆಯರಿಗೆ ಸಮಾನ ಹಕ್ಕು ದೊರಕಿಸಿಕೊಡಲು ಬಸವಣ್ಣನವರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಿದ್ದರು. ಬಳಿಕ ಅಂಬೇಡ್ಕರ್ ಅವರು ಮಹಿಳೆಯರಿಗೆ ತಂದೆ ಆಸ್ತಿಯಲ್ಲಿ ಪಾಲು, ವಿಚ್ಛೇದನ ಹಕ್ಕು ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಹಿಂದು ಕೋಡ್ ಬಿಲ್ ಜಾರಿಗೆ ಪ್ರಯತ್ನಿಸಿದ್ದರು ಎಂದು ಖರ್ಗೆ ತಿಳಿಸಿದರು.
ರಾಜ್ಯ ಸರ್ಕಾರ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಹೇಳಿದರು.
ಶೀಘ್ರದಲ್ಲೇ ಡೇ ಕೇರ್ ಸೆಂಟರ್ :
ವಿಶೇಷಚೇತನ ಮಕ್ಕಳ ಆರೈಕೆಗೆ ಕಲಬುರಗಿ ನಗರದಲ್ಲಿ ಶೀಘ್ರದಲ್ಲೇ ಡೇ ಕೇರ್ ಸೆಂಟರ್ ಆರಂಭಿಸಲಾಗುವುದು. ಜೊತೆಗೆ ಹಳೆಯದಾಗಿರುವ ರಾಜ್ಯ ಮಹಿಳಾ ವಸತಿ ನಿಲಯಕ್ಕೆ ಹೊಸ ಕಟ್ಟಡ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿಗೆ ವಿಶೇಷ ಸನ್ಮಾನ :
ಜಿಲ್ಲೆಯಲ್ಲಿ ಅಪೌಷ್ಟಿಕತೆ ನಿವಾರಣೆ, ಬಾಲ್ಯ ವಿವಾಹ ತಡೆ ಹಾಗೂ ಅಂಗನವಾಡಿ ಅಭಿವೃದ್ಧಿ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನಮ್ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಅಂಗನವಾಡಿ ಕೇಂದ್ರಕ್ಕೆ ಉಚಿತ ಭೂಮಿ ನೀಡಿದ ನಿವೇಶನ ಮಾಲೀಕರಾದ ಮಾಲಾಶ್ರೀ ಶಿವಮೂರ್ತಿ ಮೇಲಕೇರಿ, ರೇವಣಸಿದ್ದಪ್ಪ ದುಕಾನದಾರ, ಅಫಜಲಫೂರ ತಾಲೂಕಿನ ಪ್ರತಿ ಅಂಗನವಾಡಿ ಕೇಂದ್ರಕ್ಕೆ ತಲಾ 30 ಮಕ್ಕಳಂತೆ 8 ಅಂಗನವಾಡಿ ಕೇಂದ್ರಗಳ 240 ಮಕ್ಕಳಿಗೆ ಸಮವಸ್ತ್ರ ನೀಡಿದ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಪಾಟೀಲ, ಗೃಹ ಲಕ್ಷ್ಮೀ ಯೋಜನೆಯಿಂದ ಬಂದ ಹಣ ಕೂಡಿಟ್ಟು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಪೀಠೋಪಕರಣಗಳು, ಕಲಿಕಾ ಸಾಮಗ್ರಿ ನೀಡಿದ ಅಂಗನವಾಡಿ ಕಾರ್ಯಕರ್ತೆಯರಾದ ವಿದ್ಯಾನಿಧಿ, ಸಿದ್ದಮ್ಮ, ಮಲ್ಲಮ್ಮ, ನೇತ್ರಾವತಿ, ತಯ್ಯಬಾ ಅವರಿಗೂ ವಿಶೇಷವಾಗಿ ಸತ್ಕರಿಸಿ ಗೌರವಿಸಲಾಯಿತು.
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಿಕಾ ಪರಮೇಶ್ವರ, ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸೈಯದ್ ಮಹೆಬೂಬ್ ಚಿಸ್ತಿ, ಭೀಮರಾಯನಗುಡಿ ಕಾಡಾ ಅಧ್ಯಕ್ಷ ಬಾಬು ಹೊನ್ನನಾಯಕ್, ಮೇಯರ್ ವರ್ಷಾ ರಾಜೀವ ಜಾನೆ, ಉಪ ಮೇಯರ್ ತೃಪ್ತಿ ಲಾಖೆ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡುರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿಸಿಪಿ ಶಾಲೂ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಅಯುಕ್ತೆ ಸಾಹಿತ್ಯ ಆಲದಕಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ ಸೇರಿದಂತೆ ತಾಲೂಕಾ ಸಿ.ಡಿ.ಪಿ.ಓ. ಗಳು, ಅಧಿಕಾರಿ-ಸಿಬ್ಬಂದಿಗಳು, ಅಂಗನವಾಡಿ ಕಾಯಕರ್ತೆಯರು ಇದ್ದರು.






