'ಹಸಿರು ಕಲ್ಯಾಣ ಕರ್ನಾಟಕ' ನಿರ್ಮಾಣಕ್ಕೆ ಶ್ರಮಿಸಿ: ಡಾ.ಮಲ್ಲಿಕಾರ್ಜುನ ಖರ್ಗೆ ಕರೆ
ವನಮಹೋತ್ಸವಕ್ಕೆ ಕಲಬುರಗಿಯಲ್ಲಿ ಅದ್ದೂರಿ ಚಾಲನೆ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಪ್ರಮಾಣ ಕಡಿಮೆ ಇದೆ, ಹಾಗಾಗಿ ನಿರ್ದಿಷ್ಟ ಗುರಿಯೊಂದಿಗೆ ಗಿಡಗಳನ್ನು ನೆಟ್ಟು ಅವುಗಳ ಸಂರಕ್ಷಣೆ ಮಾಡಿ, 'ಹಸಿರು ಕಲ್ಯಾಣ ಕರ್ನಾಟಕ' ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.
ಶನಿವಾರ ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲಬುರಗಿ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಇವುಗಳ ಸಹಯೋಗದೊಂದಿಗೆ ಶನಿವಾರ ಇಲ್ಲಿನ ಪಿ.ಡಿಎ ಕಾಲೇಜು ಹಿಂಭಾಗದ ಹೆಚ್.ಕೆ.ಇ. ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಆಯೋಜಿಸಿದ “ವನಮಹೋತ್ಸವ-2025", “ಹಸಿರು ಪಥ” ಹಾಗೂ “ಕಲಬುರಗಿಯ ಹಸಿರು ಹೆಜ್ಜೆ” ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮತ್ತು ಮಕ್ಕಳಿಗೆ ಸಾಂಕೇತಿಕವಾಗಿ ಗಿಡಗಳನ್ನು ವಿತರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಅರಣ್ಯ ಸಂರಕ್ಷಣೆಗೆ 1980ರಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಗೆ ತಂದರು. ರಾಜ್ಯದಲ್ಲಿ ಬರಗಾಲ ಬಂದಾಗ ಇಲ್ಲಿಗೆ ಬಂದಿದ್ದ ಅವರು ಅರಣ್ಯ ಬೆಳೆಸುವ ಬಗ್ಗೆ ಸಲಹೆ ನೀಡಿದ್ದರು. ಮತ್ತೊಬ್ಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದು ಅರಣ್ಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ, ಅರಣ್ಯಕ್ಕೆ ಸಂಬಂಧಿಸಿದಂತೆ ಜಾರಿಗೆ ಬಂದ ಕಾನೂನುಗಳನ್ನು ದೇಶದ ಯಾವ ರಾಜ್ಯಗಳು ಪಾಲನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇತ್ತೀಚೆಗೆ ಕೇಂದ್ರ ಸರ್ಕಾರ ಈ ಕಾಯ್ದೆ ತಿದ್ದುಪಡಿ ತಂದಿದ್ದಾದರು ಯಾವುದೇ ಪರಿಣಾಮಕಾರಿ ಯೋಜನೆ ಹಾಕಿಕೊಂಡಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಜನರು ಸ್ವಚ್ಛ ಗಾಳಿ, ಬೆಳಕು, ಆಹಾರ ಸಿಗದೆ ಅಪಾಯಕ್ಕೆ ಸಿಲುಕುವಂತಾಗುತ್ತದೆ ಎಂದರು.
ಪರಿಸರ ಸಮತೋಲನ ಕಾಪಾಡಬೇಕಾದರೆ ಶೇ.33ರಷ್ಟು ಅರಣ್ಯ ಹೊಂದುವುದು ಅವಶ್ಯಕ. ಇಂದು ದೇಶದಲ್ಲಿ ಶೇ.25.15 ಮಾತ್ರ ಅರಣ್ಯ ಪ್ರದೇಶ ಇದೆ. ಇನ್ನು ಕರ್ನಾಟಕದಲ್ಲಿ ಇದರ ಪ್ರಮಾಣ ಶೇ.21 ಮಾತ್ರ. ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಬೇಕು. ಮುನುಷ್ಯನ ದುರಾಸೆಯಿಂದ ಶೇ.20 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ನಾವು ಕಳೆದುಕೊಂಡಿದ್ದೇವೆ. ರಸ್ತೆ ಬದಿಯಲ್ಲಿ ಸಸಿ ನೆಡುವುದಷ್ಟೇ ಅಲ್ಲದೇ ಅವುಗಳ ರಕ್ಷಣೆ ಮಾಡಬೇಕು. ಸಾರ್ವಜನಿಕರು ಕೂಡಾ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಅವರು ಒತ್ತಿ ಹೇಳಿದರು.
ತಾನು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅರಣ್ಯ ಪ್ರದೇಶ ವಿಸ್ತರಣೆಗೆ ಪ್ರಯತ್ನ ಪಟ್ಟಿರುವುದನ್ನು ನೆನಪಿಸಿಕೊಂಡ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಜನರು ಆಗೆಲ್ಲ ರಸ್ತೆ ಬದಿಯ ಗಿಡಗಳನ್ನು ಕಡಿದುಕೊಂಡು ಹೋಗಿ ಕೃಷಿ ಪರಿಕರಗಳನ್ನು ಮಾಡಿಕೊಳ್ಳುತ್ತಿದ್ದರು. ಒಣಗಿದ ಅಥವಾ ಕೆಲಸಕ್ಕೆ ಅನುಕೂಲವಾಗುವ ಗಿಡ-ಮರ ಕಡಿದರೆ ಅದರಿಂದ ಸಮಸ್ಯೆಯಾಗುವುದಿಲ್ಲ. ಆದರೆ ಬೆಳೆದು ನಿಂತ ಮರ ಕಡಿದರೆ ಅದು ಅಪಾಯವಾಗುತ್ತದೆ ಎಂದರು.
ಇತ್ತೀಚಿಗೆ ಹೃದಯಾಘಾತದಿಂದ ಜನರು, ಅದರಲ್ಲೂ ಯುವಕರು ಸಾವನ್ನಪ್ಪುತ್ತಿದ್ದಾರೆ, ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಹೆಚ್ಚು ಜನರು ಮೃತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಖರ್ಗೆ ಅವರು ಜನರು ಜೀವನ ನಡೆಸಲು ಸ್ವಚ್ಛ ಗಾಳಿ, ಬೆಳಕು, ನೀರು ಬೇಕೆ ಬೇಕು. ಇವೆಲ್ಲ ದೊರಕಬೇಕೆಂದರೆ ಪರಿಸರ ಉತ್ತಮವಾಗಿರಬೇಕು. ಜನರ ಒಳಿತಿಗಾಗಿ ಈ ಪ್ರದೇಶಕ್ಕೆ 371ಜೆ ವಿಶೇಷ ಮೀಸಲಾತಿ ಕಲ್ಪಿಸಿದ್ದೇವೆ. ಪರಿಸರ ಸಂರಕ್ಷಣೆ ಸಹ ನಿಮ್ಮ ಭವಿಷ್ಯದ ಬದುಕಿಗೆ, ಯುವ ಪೀಳಿಗೆಗೆ ನೆರವಾಗಲಿದೆ. ರಾಜ್ಯ ಸರ್ಕಾರ ಈ ವರ್ಷ 3 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಿದೆ. ಅವುಗಳಲ್ಲಿ 2.50 ಕೋಟಿ ಸಸಿಗಳು ಬದುಕಿದರೆ ಅದೆಷ್ಟೋ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ದಕ್ಷಿಣ ಕರ್ನಾಟಕದ ಬಹುತೇಕ ಕಡೆ ರಸ್ತೆ ಬದಿ ಚೆನ್ನಾಗಿ ಮರಗಳನ್ನು ಬೆಳೆಸಿದ್ದಾರೆ. ನೋಡಲು ಸುಂದರವಾಗಿ ಕಾಣುತ್ತವೆ. ರಸ್ತೆ ಬದಿ ಬಿಟ್ಟು ಒಳಗಡೆ ಹೋದರೆ ಮರಗಳಿಲ್ಲ. ಮರ ಕತ್ತರಿಸಿ ಜಮೀನು ಮಾಡಿಕೊಂಡಿದ್ದಾರೆ. ಹೀಗಾದರೆ ಪರಿಸರ ಸಂರಕ್ಷಣೆ ಹೇಗೆ ಸಾಧ್ಯ? ಆಲಮಟ್ಟಿ, ನಾರಾಯಣಪುರ, ಕಾರಂಜಾ ಜಲಾಶಯ, ಕೃಷ್ಣಾ-ಭೀಮಾ ನದಿ ಹಾಗೂ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಹಿನ್ನಿರಿನ ನೆರವಿನಿಂದ ಗಿಡ-ಮರಗಳನ್ನು ಬೆಳೆಸಿ ಅರಣ್ಯ ಪ್ರದೇಶ ವಿಸ್ತರಿಸಬೇಕು. ಇನ್ನು ಶಾಲಾ-ಕಾಲೇಜು, ರಸ್ತೆ ಬದಿ, ಮನೆ ಮುಂದೆ ಅಲ್ಲದೇ ಜಮೀನುಗಳಲ್ಲೂ ಕೂಡಾ ಸಸಿ ನೆಡಬೇಕೆಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ರಾಜ್ಯದಲ್ಲಿ 21% ಹಾಗೂ ಕಲ್ಯಾಣ ಕರ್ನಾಟಕದಲ್ಲಿ 5% ಕ್ಕಿಂತ ಕಡಿಮೆ ಅರಣ್ಯಪ್ರದೇಶವಿದೆ. ಈ ಭಾಗದಲ್ಲಿ ಹೆಚ್ಚು ಹಸಿರು ಹೊದಿಕೆ ಮಾಡುವ ಗುರಿಯೊಂದಿಗೆ 28 ಲಕ್ಷ ಸಸಿ ನೆಡಲಾಗುತ್ತಿದೆ. ಇವುಗಳಲ್ಲಿ 7 ಲಕ್ಷ ಎತ್ತರದ ಸಸಿಗಳಿವೆ. ಮರ ನೆಡುವುದು ಅತ್ಯಂತ ಪವಿತ್ರವಾದ ಕೆಲಸವಾಗಿದೆ. ಹಾಗಾಗಿ, ನೀವೆಲ್ಲ ಸಸಿಗಳನ್ನು ನೆಟ್ಟು ಪೋಷಿಸಿ ಪರಿಸರ ರಕ್ಷಣೆ ಮಾಡಬೇಕು. ಸರ್ಕಾರದ ವತಿಯಿಂದ ಕಲ್ಯಾಣ ಕರ್ನಾಟಕದಲ್ಲಿ ಭಾಗದಲ್ಲಿ ಪ್ರತಿವರ್ಷ 1 ಕೋಟಿ ಸಸಿ ನೆಡಲಾಗುವುದು ಎಂದರು.
" ಮನೆಗೊಂದು ಮರ, ಊರಿಗೊಂದು ವನ " ಯೋಜನೆಯಡಿಯಲ್ಲಿ ಸಸಿಗಳನ್ನು ನೆಡುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಈ ವರ್ಷ 3 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ. ಪ್ರಕೃತಿ ವಿಕೋಪದಿಂದ ಬೆಟ್ಟಗಳು ಕುಸಿಯತ್ತಿವೆ ಹಾಗೂ ಜಾಗತಿಕ ತಾಪಮಾನ ಏರಿಕೆಯಿಂದ ಅಪಾಯ ಎದುರಾಗುತ್ತಿದೆ. ಮಳೆ ಸರಿಯಾದ ಸಮಯದಲ್ಲಿ ಬಾರದ ಕಾರಣ ಬೆಳೆಗಳು ನಷ್ಟವಾಗುತ್ತಿವೆ. ನಗರೀಕರಣ ಹಾಗೂ ಅಭಿವೃದ್ದಿ ಹೆಸರಿನಲ್ಲಿ ಜನರು ಮರಗಳನ್ನು ಕಡಿಯುತ್ತಿದ್ದಾರೆ. ಗಾಳಿ, ನೀರು, ಆಹಾರದಲ್ಲಿ ಮಾಲಿನ್ಯಗಳಿದ್ದು ಜನರಿಗೆ ರೋಗಗಳು ಬರುತ್ತಿವೆ. ಆರೋಗ್ಯಕರ ವಾತಾವರಣ ಮಾಡಲು ಮರ ಗಿಡಗಳನ್ನು ಬೆಳೆಸಬೇಕು.
ಈಗಾಗಲೇ ನೆಟ್ಟಿರುವ ಸಸಿಗಳು ಅಸ್ಥಿತ್ವದಲ್ಲಿಲ್ಲ ಎನ್ನುವ ಮಾತುಗಳಿವೆ. ಹಾಗಾಗಿ, ಮೂರನೆಯ ( Third party ) ಖಾಸಗಿ ಸಂಸ್ಥೆಯಿಂದ ತನಿಖೆ ನಡೆಸಲಾಗುವುದು. ಈಗಾಗಲೇ 6,000 ಹೆಕ್ಟೇರ್ ಪ್ರದೇಶದ ಅರಣ್ಯ ಭೂಮಿ ತೆರವು ಮಾಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ವನ್ಯ ಜೀವಿ ಸಂರಕ್ಷಣೆ, ಉದ್ಯಾನವನ, ಮೃಗಾಲಯ ಹಾಗೂ ಟೀ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಚಿಂಚೋಳಿಯ ಚಂದ್ರಂಪಳ್ಳಿಯ ಬಳಿ ಎಕೋ ಟೂರಿಸಂ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದರು.
ದ್ರಾವಿಡರ ನಾಡಿನಲ್ಲಿ ನಿಸರ್ಗ ದೇವರಾಗಿತ್ತು. ಆದರೆ, ಆಧುನಿಕರಣದ ಹೆಸರಲ್ಲಿ ಅರಣ್ಯ,ನದಿ ಹಾಳುಮಾಡಲಾಗುತ್ತಿದೆ. ಭೂಮಿಯ ಶೇ 33 ರಷ್ಟು ಅರಣ್ಯ ಇರಬೇಕಿತ್ತು. ಕಲುಬುರಗಿ ಜಿಲ್ಲೆಯಲ್ಲಿ ಕೇವಲ 2% ಮಾತ್ರ ಅರಣ್ಯ ಇದೆ. ಇದು ಅಪಾಯಕಾರಿ ಬೆಳವಣಿಗೆ. ಪ್ರತಿಯೊಬ್ಬರು ಸಸಿ ನೆಡುವ ಕಡ್ಡಾಯ ಕಾನೂನು ಜಾರಿಗೆ ತರಬೇಕು. ಜನರು ಆಂದೋಲನ ಮಾಡಬೇಕು. ಈ ಹಿಂದೆ ಸುಂದರ್ ಲಾಲ್ ಬಹುಗುಣ ಅವರಂತ ನಾಯಕರು ನಿಸರ್ಗ ರಕ್ಷಣೆಗಾಗಿ ಅಪ್ಪಿಕೋ ಚಳುವಳಿ ಮಾಡಿದರು. ಈಗ ಅಂತಹ ಚಳುವಳಿ ಅಗತ್ಯವಿದೆ ಎಂದು ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರ್ಟಿಕಲ್ 371( J) ಜಾರಿಗೆ ತಂದು ಈ ಭಾಗದ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರು ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿಗಳಾಗಲೀ. ಕೇಂದ್ರ ಸರ್ಕಾರ ಖರ್ಗೆ ಸಾಹೇಬರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಿ ಎಂದು ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಹೇಳಿದರು.
ವನ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಕಾರ್ಯಕ್ರಮ ನಡೆದ ಸ್ಥಳದಲ್ಲಿಯೆ ಡಾ.ಮಲ್ಲಿಕಾರ್ಜುನ ಖರ್ಗೆ, ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆದಿಯಾಗಿ ಚುನಾಯಿತ ಜನಪ್ರತಿನಿಧಿಗಳು ಸವಿನೆನಪಿಗೆ ಸಸಿ ನೆಟ್ಟು ನೀರು ಹಾಕಿದರು. ಎಚ್.ಕೆ.ಇ. ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿಯೂ ಅಭಿಯಾನದ ಅಂಗವಾಗಿ ನೂರಾರು ಸಂಖ್ಯೆಯಲ್ಲಿ ಗಿಡಗಳನ್ನು ನೆಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಹಸಿರು ಪಥ ಲೋಗೋ ಬಿಡುಗಡೆ ಮತ್ತು ವನಮಹೋತ್ಸವ, ಹಸಿರು ಹೆಜ್ಜೆಗಳು ಹಾಗೂ ಹಸಿರು ಪಥದ ವಿಡಿಯೋ ಟೀಸರ್ ಸಹ ಬಿಡುಗಡೆಗೊಳಿಸಲಾಯಿತು.
ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ಬರ ಖಂಡ್ರೆ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಅಫಜಲಪುರ ಶಾಸಕ ಎಂ.ವೈ. ಪಾಟೀಲ, ಕರ್ನಾಟಕ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ಸಂಸದ ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಲಬುರಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಮಹಾನಗರ ಪಾಲಿಕೆ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪನ್ವಾರ್, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿ.ಸಿ.ಎಫ್ ಸುಮಿತ್ ಪಾಟೀಲ, ಚೇತನ್ ಗಸ್ತಿ, ಸಾಗರ್ ತಾವದೆ, ಎ.ಬಿ.ಪಾಟೀಲ್ ಸೇರಿದಂತೆ ಇತರೆ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು. ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಸ್ವಾಗತಿಸಿದರು.