ಆಳಂದ | ಮಟಕಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕಲಬುರಗಿ: ಆಳಂದ ತಾಲ್ಲೂಕಿನ ಮಟಕಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಸಂಬುದ್ಧ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜು, ಪ್ರಾದೇಶಿಕ ಮತ್ತು ಸಾಮಾಜಿಕ ವಲಯ ಅರಣ್ಯ ಇಲಾಖೆ, 3ಜೆ ಕ್ಲಬ್ ಹಾಗೂ ನಿರಗುಡಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಏರ್ಪಡಿಸಿದ ವಿಶ್ವ ಪರಿಸರ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ ಪಾಟೀಲ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು, ಅಮೂಲ್ಯವಾದ ಪ್ರಾಕೃತಿಕ ಸಂಪತ್ತು ಸಂರಕ್ಷಣೆಗಾಗಿ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.
ಕಲಬುರಗಿ ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಡಾ.ಸುಮಿತ್ ಪಾಟೀಲ ಮಾತನಾಡಿ, ಅರಣ್ಯ ಇಲಾಖೆಯು ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ನೆಟ್ಟು ಬೆಳಸುತ್ತಿದೆ. ಇದರ ಜೊತೆ ನರೇಗಾ ಯೋಜನೆಯಡಿ ರೈತರಿಗೂ ಸಸಿ ನೆಡಲು ಪ್ರೋತ್ಸಾಹ ನೀಡುವ ಯೋಜನೆ ರೂಪಿಸಲಾಗಿದೆ. ಸಂಘ, ಸಂಸ್ಥೆ ಹಾಗೂ ಶಾಲಾ ಕಾಲೇಜುಗಳು ಪರಿಸರ ಸಂರಕ್ಷಣೆಗಾಗಿ ಗಿಡ ಮರ ಬೆಳಸಲು ಅಗತ್ಯ ಚಟುವಟಿಕೆ ಹಮ್ಮಿಕೊಳ್ಳಲು ತಿಳಿಸಿದರು.
ಜಿಲ್ಲಾ ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಸಾಗರ ತಾವಡೆ, ಸಂಸ್ಥೆಯ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಮಾತನಾಡಿದರು.
ಮಟಕಿ ಶಾಲೆ ಮುಖ್ಯಶಿಕ್ಷಕ ಅಣ್ಣಪ್ಪ ಹಾದಿಮನಿ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ಪ್ರದೀಪ ಕಾಂಬಳೆ, ಗ್ರಾಪಂ ಉಪಾಧ್ಯಕ್ಷ ಲಾಯಕಲಿ ದಕನೆ, ಪ್ರಾಂಶುಪಾಲ ಸಂಜಯ ಪಾಟೀಲ, ವಲಯ ಅರಣ್ಯ ಅಧಿಕಾರಿಗಳಾದ ಶಾಂತರೆಡ್ಡಿ, ವಿರೇಂದ್ರ ಯಳವಂತಗಿ, ಪಿಡಿಒ ಶಿವಲಿಂಗಯ್ಯ ಮಠಪತಿ, ಗ್ರಾಪಂ ಮಾಜಿ ಅಧ್ಯಕ್ಷ ಸುಭಾಷ ಪಾಟೀಲ, ದತ್ತಾತ್ರೇಯ ಬಿರಾದಾರ, ಗ್ರಾಪಂ ಸದಸ್ಯರಾದ ನಾಗರಾಜ ತಡಕಲ,ರೇವಪ್ಪ ಮುಲಗೆ, ಅಲ್ಲಾಭಕಾಶ್ ಇನಾಂದಾರ, ಚಂದ್ರಕಾಂತ ಸೂರವಸೆ, ದಿಲೀಪ ಕಾಳೆ, ಗುರುಕಿರಣ ವಾಡಿ, ಫಕ್ರೋದಿನ್ ಇನಾಂದಾರ, ಸಿದ್ಧಲಿಂಗ ಹಿಪ್ಪರಗಿ ಉಪಸ್ಥಿತರಿದ್ದರು.
ಸಿದ್ಧಾರ್ಥ ಹಸೂರೆ ನಿರೂಪಿಸಿದರೆ, ಸಂಜಯ್ ಎಸ್.ಪಾಟೀಲ ಸ್ವಾಗತಿಸಿದರು. ಸುರೇಶ ಪಾಟೀಲ ವಂದಿಸಿದರು. ಸಂಗೀತ ಕಲಾವಿದ ಶಂಕರ ಹೂಗಾರ, ಸವಿತಾ ಎಸ್. ಕಾಂಬಳೆ ಅವರು ಪರಿಸರ ಗೀತೆ ಹಾಡಿದರು. ಇದೇ ಸಂದರ್ಭದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಕೈಗೊಳ್ಳಲಾಯಿತು. ನಂತರ ಸಂಬುದ್ಧ ಕಾಲೇಜು ವಿದ್ಯಾರ್ಥಿಗಳಿಂದ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.