ಇಸ್ಲಾಮ್ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸಿ: ಸಾಣೇಹಳ್ಳಿ ಶ್ರೀಗೆ ಆಂದೋಲಾಶ್ರೀ ತಿರುಗೇಟು

ಕಲಬುರಗಿ, ಸೆ.8: ’ಇಸ್ಲಾಂ ಧರ್ಮ ಹಾಗೂ ಲಿಂಗಾಯತ ಎರಡು ಒಂದೇ ಎಂದು ಹೇಳುವ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಗಳು, ಇಸ್ಲಾಮ್ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸಿಕೊಳ್ಳಲಿ’ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಣೇಹಳ್ಳಿ ಸ್ವಾಮೀಜಿ ಇಸ್ಲಾಮ್ ಮತ್ತು ಲಿಂಗಾಯತ ಎರಡು ಒಂದೇ ಅಂತ ಹೇಳಿದ್ದೀರಿ. ನಿಮಗೆ ವೀರಶೈವ ಮತ್ತು ಲಿಂಗಾಯತ ಭೇದಭಾವವಿದೆ. ಲಿಂಗಾಯತ ಧರ್ಮವನ್ನು ಇತರ ಧರ್ಮಗಳಿಗೆ ಬೆರೆಸಬೇಡಿ, ಅದರಲ್ಲಿ ಹಿಂದೂ ಹಾಗೂ ವೀರಶೈವದಲ್ಲಿ ಮೊದಲೇ ನಮೂದಿಸಬೇಡಿ ಎಂದು ಹೇಳುತ್ತಾರೆ. ಹಿಂದೂ ಧರ್ಮ ನಿಮಗೆ ಬೇಡವಾದರೆ ಇಸ್ಲಾಮ್ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿ ಎಂದು ತಿರುಗೇಟು ನೀಡಿದ್ದಾರೆ.
ಜಾತಿ ಸಮೀಕ್ಷೆ ನಡೆಸುವ ಹೊಣೆ ರಾಜ್ಯ ಸರಕಾರದ್ದು aಲ್ಲ, ಈ ಬಗ್ಗೆ ಸಮೀಕ್ಷೆ ಕೇಂದ್ರ ಸರಕಾರ ಮಾಡುತ್ತದೆ. ಆದರೆ ಸುಮ್ಮನೆ ಸಮೀಕ್ಷೆ ನೆಪದಲ್ಲಿ ಹಿಂದೂ ಸಮಾಜವನ್ನು ಒಡೆಯುವ ಕುತಂತ್ರ ಸರಕಾರ ಮಾಡುತ್ತಿದೆ. ಉಪಜಾತಿಗಳು ಲಿಂಗಾಯತ, ಕುರುಬ, ಮತ್ತಿತರ ಜಾತಿಗಳನ್ನು ಹೇಳಿದರೆ ಅವುಗಳ ಮುಂದೆ ಕ್ರಿಶ್ಚಿಯನ್ ಎಂದು ನಮೂದಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ದೇವಪುರದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯ, ರಾಜಶೇಖರ್ ಶಿವಾಚಾರ್ಯ, ಶಿವಶಂಕರ್ ಶಿವಾಚಾರ್ಯ, ಡಾ.ಸಿದ್ಧರಾಮ ಶಿವಾಚಾರ್ಯ, ಗುರುಮೂರ್ತಿ ಶಿವಾಚಾರ್ಯ, ಸಿದ್ಧ ರೇಣುಕ ಶಿವಾಚಾರ್ಯ, ಚೆನ್ನಾರುದ್ರಮುನಿ ಶಿವಾಚಾರ್ಯ, ಪಂಚಾಕ್ಷರಿ ಮಹಾಸ್ವಾಮಿ, ಶಂಭುಲಿಂಗ ಮಹಾಸ್ವಾಮೀಜಿ, ಸಿದ್ಧವೀರ ಶಿವಾಚಾರ್ಯ, ರೇವಣಸಿದ್ಧ ಸಾವಳೇಶ್ವರ ಶಿವಾಚಾರ್ಯ, ರಾಜಕುಮಾರ್ ಪಾಟೀಲ್ ತೆಲ್ಕೂರು, ಅರುಣಕುಮಾರ್ ಪಾಟೀಲ, ಕಲ್ಯಾಣಪ್ಪ ಪಾಟೀಲ್, ವೀರಣ್ಣ ಗೋಳೇದ ಮತ್ತಿತರರು ಇದ್ದರು.







