ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿಗೆ ಸಾಹಿತಿ ಧನ್ನಿ ಆಯ್ಕೆ

ಕಲಬುರಗಿ: ಗದಗ ಅಕ್ಷರ ದೀಪ ಫೌಂಡೇಶನ್ ಕೊಡ ಮಾಡುವ 2026ನೇ ಸಾಲಿನ ವರಕವಿ ಡಾ.ದ ರಾ ಬೇಂದ್ರೆ ರಾಷ್ಟ್ರೀಯ ಸಾಹಿತ್ಯ ರತ್ನ ಪ್ರಶಸ್ತಿಗೆ ಹಿರಿಯ ಸಾಹಿತಿ ಧರ್ಮಣ್ಣ ಎಚ್ ಧನ್ನಿ ಅವರನ್ನು ಆಯ್ಕೆ ಮಾಡಲಾಗಿದೆ.
ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ವಿಶಿಷ್ಠ ಸಾಧನೆ ಮಾಡಿರುವ ಹಿನ್ನಲೆಯಾಗಿ ಈ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಧರ್ಮಣ್ಣ ಧನ್ನಿ ಅವರು, ಸುಮಾರು 14 ಕೃತಿಗಳನ್ನು ಬರೆದು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕಥೆ, ಬಾನುಲಿ ನಾಟಕ ರೂಪಕ, ಕವನ ಸಂಕಲನ, ಹನಿಗವನ, ಹೈಕು, ತಂಕಾ ಹಾಗೂ ಗಝಲ್ ಅನ್ನು ಬರೆದಿದ್ದಾರೆ.
ಇದೇ 15ರಂದು ಬೆಳಿಗ್ಗೆ ಧಾರವಾಡ ರಂಗಾಯಣ ಸಮುಚ್ಚಯ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕನ್ನಡ ರಾಜ್ಯೋತ್ಸವ ಆಚರಣೆಯ ನಿಮಿತ್ತ ಈ ಸಮಾರಂಭ ಏರ್ಪಡಿಸಲಾಗಿದೆ. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಸತ್ಕರಿಸಲಾಗುತ್ತಿದೆ ಎಂದು ಅಕ್ಷರ ದೀಪ ಫೌಂಡೇಶನ್ ಅಧ್ಯಕ್ಷ ಪ್ರವೀಣಕುಮಾರ್ ಕನ್ಯಾಳ ತಿಳಿಸಿದ್ದಾರೆ.




