ಯಾದಗಿರಿ | ವಿಶೇಷ ನೈರ್ಮಲ್ಯ ಅಭಿಯಾನ : ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ

ಯಾದಗಿರಿ: ವಿಶೇಷ ನೈರ್ಮಲ್ಯ ಅಭಿಯಾನಕ್ಕೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿ ಜಿಲ್ಲಾಧಿಕಾರಿಗಳಾದ ಡಾ. ಸುಶೀಲಾ ಬಿ. ಹಾಗೂ ಜಿಲ್ಲಾ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ಆದೇಶಿಸಿದ್ದಾರೆ.
2025-26 ನೇ ಸಾಲಿನ ಮುಂಗಾರು ಮಳೆ ಆರಂಭ ಹಿನ್ನೆಲೆಯಲ್ಲಿ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಮಳೆಯಿಂದ ಮಲಿನ ನೀರು ಸೇರಿ ಕುಡಿಯುವ ನೀರು ಕಲುಷಿತಗೊಳ್ಳದಿರುವ ಕುರಿತು ಮುನ್ನೆಚ್ಚರಿಕೆಯಾಗಿ ಕ್ರಮ ಕೈಗೊಳ್ಳಲು ಈ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಪ್ರಸಕ್ತ ಮುಂಗಾರಿನಲ್ಲಿ ಆಗುವ ಮಳೆಯಿಂದಾಗಿ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ನೀರು ಹರಿದು ಚರಂಡಿ, ತೆರೆದ ಬಾವಿ, ಬೋರ್ ವೆಲ್ ಗಳಲ್ಲಿ ಸೇರಿಕೊಂಡು ಕಲುಷಿತಗೊಳ್ಳುವ ಸಾಧ್ಯತೆಯಿದೆ. ಕೂಡಲೇ ಗ್ರಾಮಗಳಲ್ಲಿ ಇರುವ ಎಲ್ಲ ಚರಂಡಿ, ಬಾವಿ, ಬೋರ್ ವೆಲ್ ಸುತ್ತ ಮುತ್ತ ಬ್ಲೀಚಿಂಗ್ ಮತ್ತು ಕ್ಲೋರಿನೇಶನ್ ಮಾಡುವ ಮೂಲಕ ಸ್ವಚ್ಛಗೊಳಿಸಬೇಕು.
ಚರಂಡಿಗಳ ಮೂಲಕ ಹಾದು ಹೋಗಿರುವ ಕುಡಿಯುವ ನೀರಿನ ಪೈಪುಗಳನ್ನು ಪರಿಶೀಲಿಸಿ ಅವುಗಳ ಬದಲಾವಣೆ ಗೆ ಮತ್ತು ಯಾವುದೇ ರೀತಿಯ ಲೀಕೆಜ್ ಇಲ್ಲದಂತೆ ಮುಂಜಾಗ್ರತಾ ಕ್ರಮವಹಿಸುವ ಕುರಿತು ' ವಿಶೇಷ ನೈರ್ಮಲ್ಯ ಅಭಿಯಾನ ವನ್ನು ಜೂ.9 ರಿಂದ ಸ್ವಚ್ಛ ಗ್ರಾಮ ವಾತಾವರಣ ನಿರ್ಮಿಸಲು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮ ಪಂಚಾಯತ್ ಮತ್ತು ಗ್ರಾಮಗಳಲ್ಲಿ ನಿಯಮಾನುಸಾರ ಮಳೆಗಾಲ ಅಂತ್ಯದವರೆಗೆ ಅಭಿಯಾನ ಕೈಗೊಳ್ಳಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಸಿಇಓ.ಜಿ ಪಂ ಇವರು ಜಂಟಿಯಾಗಿ, ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿದ್ದಾರೆ ಎಂದು ಯಾದಗಿರಿ ಜಿ.ಪಂ ಸಿಇಓ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.







