ಯಡ್ರಾಮಿ | ವಿದ್ಯುತ್ ತಂತಿ ತಗುಲಿ ರೈತ ಮೃತ್ಯು: ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

ಯಡ್ರಾಮಿ: ಮೇನ್‌ಲೈನ್ ವಿದ್ಯುತ್ ತಂತಿ ತಗುಲಿ ರೈತನೊಬ್ಬ ವಿದ್ಯುತ್ ಆಘಾತದಿಂದ ಮೃತಪಟ್ಟ ದಾರುಣ ಘಟನೆ ತಾಲೂಕಿನ ಹರನಾಳ (ಬಿ) ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು ಮಾನಪ್ಪ ತಂದೆ ಯಮನಪ್ಪ ಮೋರಟಗಿ (55) ಎಂದು ಗುರುತಿಸಲಾಗಿದೆ.
ಮಾನಪ್ಪ ಅವರು ಅಲ್ಪ ಪ್ರಮಾಣದ ಜಮೀನಿನಲ್ಲಿ ಕೃಷಿ ಮಾಡಿಕೊಂಡು, ಸಾಲ ಮಾಡಿ ಕುರಿಗಳನ್ನು ಸಾಕುವ ಮೂಲಕ ಕುಟುಂಬದ ಜೀವನ ನಿರ್ವಹಿಸುತ್ತಿದ್ದರು. ಕುಟುಂಬದ ಪ್ರಮುಖ ಆಧಾರಸ್ತಂಭವಾಗಿದ್ದ ಅವರು ಸೋಮವಾರ ಬೆಳಿಗ್ಗೆ ಎಂದಿನಂತೆ ಕುರಿಗಳಿಗೆ ಮೇವು ತರಲು ಹೊಲಕ್ಕೆ ತೆರಳಿದ್ದರು.
ರಾತ್ರಿ ಸುರಿದ ಮಳೆಯಿಂದ ನೆಲ ಜಾರುವಂತಾಗಿದ್ದ ಹಿನ್ನೆಲೆಯಲ್ಲಿ ಕಾಲು ಜಾರಿ ಬಿದ್ದ ವೇಳೆ ಮೇನ್‌ಲೈನ್ ವಿದ್ಯುತ್ ತಂತಿ ತಗುಲಿ ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ವಿದ್ಯುತ್ ಇಲಾಖೆ ಹಾಗೂ ಯಡ್ರಾಮಿ ಪೊಲೀಸರಿಗೆ ಮಾಹಿತಿ ನೀಡಿದರು. ವಿದ್ಯುತ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಶೈಲ್ ಹಾಗೂ ಎಎಸ್‌ಐ ಸುರೇಶ್ ಮಹಜರು ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಡ್ರಾಮಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.
ಈ ಸಂಬಂಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ರೈತರು ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರ ಘೋಷಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕೃಷಿ ಇಲಾಖೆಯಿಂದ 10 ಲಕ್ಷ ರೂ. ಹಾಗೂ ವಿದ್ಯುತ್ ಇಲಾಖೆಯಿಂದ 10 ಲಕ್ಷ ರೂ. ಸೇರಿದಂತೆ ಒಟ್ಟು 20 ಲಕ್ಷ ರೂ. ಪರಿಹಾರ ನೀಡಬೇಕು. ಜೊತೆಗೆ ಕುಟುಂಬದ ಸದಸ್ಯರಿಗೆ ಜೀವನೋಪಾಯ ನೆರವು ಹಾಗೂ ಅಗತ್ಯ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.






