ಯಡ್ರಾಮಿ | ಉತ್ತರ ಕರ್ನಾಟಕವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಕರವೇ ಆಗ್ರಹ

ಯಡ್ರಾಮಿ: ಉತ್ತರ ಕರ್ನಾಟಕ ಸೇರಿದಂತೆ ಯಡ್ರಾಮಿ ಹಾಗೂ ಜೇವರ್ಗಿ ಅವಳಿ ತಾಲೂಕುಗಳಲ್ಲಿ ಸಮರ್ಪಕ ಮುಂಗಾರು ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕೂಡಲೇ ಉತ್ತರ ಕರ್ನಾಟಕವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಪರಿಹಾರ ಪ್ಯಾಕೇಜ್ ಪ್ರಕಟಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉತ್ತರ ಕರ್ನಾಟಕ ಘಟಕ ಆಗ್ರಹಿಸಿದೆ.
ಈ ಸಂಬಂಧ ಘಟಕದ ಅಧ್ಯಕ್ಷ ಸಾಹೇಬಗೌಡ ಬಿ. ದೇಸಾಯಿ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಸಾಹೇಬಗೌಡ ಬಿ. ದೇಸಾಯಿ, ಈ ವರ್ಷ ಸಮರ್ಪಕ ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿದ್ದು, ರೈತರು ಕೃಷಿಗೆ ಮಾಡಿದ ಹೂಡಿಕೆ ಸಂಪೂರ್ಣ ನಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಸಂಕಷ್ಟವನ್ನು ಮನಗಂಡು ಸರ್ಕಾರ ತಕ್ಷಣವೇ ಉತ್ತರ ಕರ್ನಾಟಕವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಪರಿಹಾರ ಪ್ಯಾಕೇಜ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷದ ಬೆಳೆ ವಿಮೆಯ ಎರಡನೇ ಕಂತಿನ ಪರಿಹಾರ ಮೊತ್ತವೂ ಇನ್ನೂ ರೈತರ ಖಾತೆಗೆ ಜಮೆಯಾಗಿಲ್ಲ. ಇತ್ತೀಚೆಗೆ ಕಲಬುರಗಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಎರಡು ದಿನಗಳಲ್ಲಿ ಪರಿಹಾರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರೂ, ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ಆದ್ದರಿಂದ ಯಾವುದೇ ವಿಳಂಬವಿಲ್ಲದೆ ಕಳೆದ ವರ್ಷದ ಬೆಳೆ ವಿಮೆಯ ಎರಡನೇ ಕಂತಿನ ಪರಿಹಾರವನ್ನು ಕೂಡಲೇ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಗೌರವ ಅಧ್ಯಕ್ಷ ಹಾಗೂ ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ಸಾಂಭವಶಿವ ಎಂ. ಹಿರೇಮಠ, ತಾಲೂಕು ಉಸ್ತುವಾರಿ ಅಧ್ಯಕ್ಷ ದೇವೇಂದ್ರ ನಾಯ್ಕೋಡಿ, ರೈತ ಹೋರಾಟಗಾರ ಯಲ್ಲಾಲಿಂಗ ಡಿ. ಹರನಾಳ, ಕರವೇ ಮುಖಂಡ ಹನುಮಂತ ಕೂಡ್ಗಿ, ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಜಗನ್ನಾಥ ಮಡಿವಾಳಕರ, ರಾಜಕುಮಾರ ಎನ್. ದೊರೆ, ನಿಂಗರಾಜ ಎನ್. ಕಿರಣಗಿ ಸೇರಿದಂತೆ ಹಲವರು ಇತರರಿದ್ದರು.






