Yedrami | ಸಮಯಕ್ಕೆ ಶಾಲೆಗೆ ಬಾರದ ಶಿಕ್ಷಕರು : ಬಿಸಿಲಿನಲ್ಲಿ ವಿದ್ಯಾರ್ಥಿಗಳ ಪರದಾಟ

ಯಡ್ರಾಮಿ: ತಾಲೂಕಿನ ದುಮ್ಮದ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಆಗಮಿಸದ ಕಾರಣ ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಕಾಯುವ ಪರಿಸ್ಥಿತಿ ಸೋಮವಾರ ಬೆಳಿಗ್ಗೆ ನಿರ್ಮಾಣವಾಯಿತು.
ಬೆಳಿಗ್ಗೆ 10:20 ಆದರೂ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರು ಶಾಲೆಗೆ ಆಗಮಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ತರಗತಿ ಕೊಠಡಿಯ ಮುಂಭಾಗದಲ್ಲಿ ಕುಳಿತುಕೊಂಡು ಕಾಯುತ್ತಿದ್ದರು. 9:40 ಗಂಟೆಗೆ ಒಬ್ಬ ಶಿಕ್ಷಕ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮೀಪದ ಶ್ರೀ ವರಹಳ್ಳೇರಾಯ ದೇವಸ್ಥಾನದ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ತರಗತಿಯ ಕೊಠಡಿಗಳ ಬೀಗದ ಕೈ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲೆಯ ಮುಂಭಾಗದಲ್ಲೇ ಕುಳಿತು ಶಿಕ್ಷಕರಿಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂತು.
ಅಧಿಕ ಬಿಸಿಲಿನ ತಾಪ ತಾಳಲಾಗದೆ ಕೆಲ ವಿದ್ಯಾರ್ಥಿಗಳು ಒಬ್ಬರ ಮೇಲೆ ಒಬ್ಬರು ಏರಿ ತರಗತಿ ಕೊಠಡಿಗಳ ಬಾಗಿಲು ತೆರೆಯಲು ಪ್ರಯತ್ನಿಸಿದರೆ, ಕೆಲವು ಮಕ್ಕಳು ಶಾಲೆಯ ಮುಂಭಾಗದಲ್ಲೇ ಕುಳಿತಿದ್ದರು. ಇನ್ನೂ ಕೆಲವರು ಶಿಕ್ಷಕರು ಬಾರದ ಹಿನ್ನೆಲೆಯಲ್ಲಿ ಮನೆಗಳತ್ತ ಮರಳಿರುವುದು ಕಂಡುಬಂತು.
ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಒಟ್ಟು ಐವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ 9.40ರ ಸುಮಾರಿಗೆ ಒಬ್ಬ ಶಿಕ್ಷಕ ಮಾತ್ರ ಶಾಲೆಗೆ ಆಗಮಿಸಿದರೆ ಉಳಿದ ಶಿಕ್ಷಕರು ಬೆಳಿಗ್ಗೆ 10:20 ಗಂಟೆ ನಂತರ ಶಾಲೆಗೆ ಆಗಮಿಸಿದ ಬಳಿಕ ತರಗತಿ ಕೊಠಡಿಗಳ ಬೀಗ ತೆರೆಯಲಾಯಿತು.
ಶಿಕ್ಷಕರು ತಡವಾಗಿ ಶಾಲೆಗೆ ಬಂದಿರುವುದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ಪಾಲಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಶಾಲೆಗಳಲ್ಲಿ ಸಮಯ ಪಾಲನೆ ಕಡ್ಡಾಯವಾಗಿದ್ದರೂ ನಿರ್ಲಕ್ಷ್ಯ ಧೋರಣೆ ಮುಂದುವರಿದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರು ಶಿಕ್ಷಣ ಇಲಾಖೆಯ ಅಧಿಕಾರಿಗಳು ಘಟನೆಯ ಕುರಿತು ಪರಿಶೀಲನೆ ನಡೆಸಿ, ಶಾಲೆಗಳಲ್ಲಿ ಸಮಯ ಪಾಲನೆ ಕಡ್ಡಾಯಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸೋಮವಾರ ಅಮಾವಾಸ್ಯೆ ಇರುವುದರಿಂದ ಕೆಲವು ವಿದ್ಯಾರ್ಥಿಗಳು ಮೊಟ್ಟೆ ಸೇವಿಸದ ಹಿನ್ನೆಲೆಯಲ್ಲಿ ಅವರಿಗೆ ಪರ್ಯಾಯವಾಗಿ ಬಾಳೆ ಹಣ್ಣು ಖರೀದಿಸಿ ಮಾಡಿ ಬರುವಲ್ಲಿ ತಡವಾಗಿದೆ, ಹಾಗಾಗಿ ಶಾಲೆಗೆ ಆಗಮಿಸಲು ತಡವಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಪಡಿಸುವ ಉದ್ದೇಶ ಇರಲಿಲ್ಲ.
-ಚಿಂತನಗೌಡ ಪಾಟೀಲ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದುಮ್ಮದ್ರಿ
ಪ್ರತಿ ಶೈಕ್ಷಣಿಕ ವರ್ಷ ಆರಂಭವಾದಾಗಲೇ ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗೆ ಆಗಮಿಸದಿರುವುದು ಬೇಸರದ ಸಂಗತಿಯಾಗಿದೆ. ಶಿಕ್ಷಕರ ವಿಳಂಬದಿಂದ ಪಾಠ-ಪ್ರವಚನಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದ್ದು, ನಮ್ಮ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹಿನ್ನಡೆಯಾಗುತ್ತಿದ್ದಾರೆ.
- ಶಿವನಗೌಡ, ಗ್ರಾಮಸ್ಥ






