ಅರ್ಥಪೂರ್ಣ, ಆರೋಗ್ಯಪೂರ್ಣ ಜೀವನಕ್ಕೆ ಯೋಗವೇ ರಾಜಮಾರ್ಗ : ಪ್ರಭಾವತಿ ಎಸ್. ಮೇತ್ರಿ

ಅಫಜಲಪುರ: ಅರ್ಥಪೂರ್ಣ ಹಾಗೂ ಆರೋಗ್ಯಪೂರ್ಣ ಜೀವನ ನಡೆಸಲು ಯೋಗವೇ ರಾಜಮಾರ್ಗವಾಗಿದೆ ಎಂದು ಯೋಗ ಶಿಕ್ಷಕಿ ಪ್ರಭಾವತಿ ಎಸ್. ಮೇತ್ರಿ ಹೇಳಿದರು.
ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಬಳೂರಗಿ ವತಿಯಿಂದ ಬಡದಾಳದ ಶ್ರೀ ಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ಶನಿವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಬಡದಾಳದ ಶ್ರೀ ಗುರು ಚನ್ನಮಲ್ಲೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ವಿವಿಧ ಯೋಗಾಸನಗಳ ಕುರಿತು ಮಾಹಿತಿ ನೀಡಿದ ಪ್ರಭಾವತಿ ಎಸ್. ಮೇತ್ರಿ ಅವರು, ಯೋಗಾಸನಗಳನ್ನು ಪ್ರಾಯೋಗಿಕವಾಗಿ ಮಾಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗವನ್ನು ಕೇವಲ ಒಂದು ದಿನದ ಪ್ರದರ್ಶನಕ್ಕೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ತಮ್ಮ ನಿತ್ಯದ ದಿನಚರಿಯ ಭಾಗವಾಗಿಸಿಕೊಳ್ಳಬೇಕು. ಯೋಗದಿಂದ ಸದೃಢ ಶರೀರ, ಶಾಂತ ಮನಸ್ಸು ಹಾಗೂ ಆಧ್ಯಾತ್ಮಿಕ ಜಾಗೃತಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಶಿಕ್ಷಕರು, ಶಿಕ್ಷಕಿಯರು, ಶಾಲಾ ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.




