ಕನ್ನಡ ‘ಪ್ರತಿಮೆ’ಗೆ ಸೀಮಿತವಾಗದಿರಲಿ

ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿಯ ಬೃಹತ್ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅನಾವರಣಗೊಳಿಸಿದ್ದಾರೆ. ‘‘ಇಂದು ಏಳುಕೋಟಿ ಕನ್ನಡಿಗರಿಗೆ ಹೆಮ್ಮೆ ತರುವ ದಿನ’’ ಎಂದು ಪ್ರತಿಮೆ ಅನಾವರಣಗೊಳಿಸಿದ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ. ಜೊತೆ ಜೊತೆಗೇ ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ ಕೆಲವು ಸಲಹೆಗಳನ್ನೂ ನೀಡಿದ್ದಾರೆ. ವಿಧಾನಸೌಧದಲ್ಲಿ ನಿರ್ಮಿಸಲಾಗಿರುವ ಕಂಚಿನ ಪ್ರತಿಮೆ ಎಷ್ಟರಮಟ್ಟಿಗೆ ಕರ್ನಾಟಕವನ್ನು, ಕನ್ನಡತನವನ್ನು ಪ್ರತಿನಿಧಿಸುತ್ತದೆ
ಎನ್ನುವುದು ಸ್ಪಷ್ಟವಿಲ್ಲ. ಆದರೆ, ಗಾಂಧೀಜಿಯನ್ನು ಕೊಂದು, ಬಳಿಕ ಅವರ ಪ್ರತಿಮೆಯನ್ನು ಗಲ್ಲಿಗಲ್ಲಿಗಳಲ್ಲಿ ನಿರ್ಮಿಸಿದ ದೇಶ ನಮ್ಮದು. ಆರೆಸ್ಸೆಸ್‌ನ್ನು ನಿಷೇಧಿಸಿದ ವಲ್ಲಭಬಾಯ್ ಪಟೇಲರ ಸಿದ್ಧಾಂತಗಳನ್ನು ದಫನ ಮಾಡಿ ಅದರ ಮೇಲೆಯೇ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ಮೋದಿಯವರು ನಿರ್ಮಾಣಮಾಡಿದರು. ಅಂಬೇಡ್ಕರ್‌ರ ಜಾತ್ಯಿತೀತ ಆಶಯಗಳಿಗೆ ಎಳ್ಳು ನೀರು ಬಿಟ್ಟು ಅವರ ಪ್ರತಿಮೆಗಳಿಗೆ ಕೈಮುಗಿಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ದೇಶದಲ್ಲಿ ಜನರ ಸಂಖ್ಯೆಗಿಂತ ಪ್ರತಿಮೆಗಳ ಸಂಖ್ಯೆ ಹೆಚ್ಚಾಗುವ ದಿನ ಬಂದರೆ ಅಚ್ಚರಿಯೇನೂ ಇಲ್ಲ. ಇಂದು ಸರಕಾರ ಯಾವುದೇ ವ್ಯಕ್ತಿಯ ಪ್ರತಿಮೆ ನಿರ್ಮಾಣ ಮಾಡಲು ಹೊರಟಿದೆ ಎಂದರೆ, ಅವರ ಚಿಂತನೆಗಳನ್ನು ದಫನ ಮಾಡುವಲ್ಲಿ ಅದು ಯಶಸ್ವಿಯಾಗಿದೆ ಎಂದು ಜನರು ಭೀತಿ ಪಡುವ ಸ್ಥಿತಿಯಿದೆ. ಜೀವಂತವಾಗಿರುವುದನ್ನೆಲ್ಲ ಅಳಿಸಿ ನಿರ್ಜೀವ ಪ್ರತಿಮೆಗಳಿಗೆ ಅವುಗಳನ್ನು ಸೀಮಿತವಾಗಿಸುವ ಪ್ರಯತ್ನವನ್ನು ಸರಕಾರ ಉದ್ದೇಶಪೂರ್ವಕವಾಗಿ ಮಾಡಿಕೊಂಡು ಬರುತ್ತಿದೆ. ಇದೀಗ ನಿರ್ಮಾಣಗೊಂಡಿರುವ ಪ್ರತಿಮೆ ಯಾವುದರ ಸಂಕೇತ ಎಂದು ಸಕಲ ಕನ್ನಡಿಗರು ಆತಂಕದಿಂದ ಕೇಳುವಂತಹ ಸ್ಥಿತಿ ಕರ್ನಾಟಕದಲ್ಲಿದೆ.
ಒಂದೆಡೆ ಕನ್ನಡ ಮಾತನಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳು ಅಳಿವಿನಂಚಿನಲ್ಲಿವೆ. ಯಾವುದೇ ಬ್ಯಾಂಕ್, ಪೋಸ್ಟ್‌ಆಫೀಸ್, ರೈಲ್ವೇ ಮೊದಲಾದ ಕಚೇರಿಗಳಿಗೆ ಹೋದರೆ ಅಲ್ಲಿ ಕನ್ನಡ ಮಾತನಾಡಿದರೆ ಉತ್ತರ ಸಿಗುವುದೇ ಇಲ್ಲ. ಹಿಂದಿ ಗೊತ್ತಿರುವುದು ಅನಿವಾರ್ಯ ಎನ್ನುವಂತಹ ಸ್ಥಿತಿಯಿದೆ. ನ್ಯಾಯಾಲಯಗಳಲ್ಲೂ ಕನ್ನಡ ಬಳಕೆ ಕಷ್ಟ ಎನ್ನುವ ಸ್ಥಿತಿಯಿದೆ. ಕನ್ನಡ ಗೊತ್ತಿರುವ ಸಣ್ಣ ಸಂಖ್ಯೆಯ ಕನ್ನಡಿಗರ ಸ್ಥಿತಿಯು ಸೋಮವಾರ ಮುಖ್ಯಮಂತ್ರಿ ಅನಾವರಣಗೊಳಿಸಿದ ಪ್ರತಿಮೆಗಿಂತ ಭಿನ್ನವೇನೂ ಇಲ್ಲ. ಪ್ರತಿಮೆ ಮಾತನಾಡುವುದಿಲ್ಲ. ಕನ್ನಡಿಗರು ಮಾತನಾಡಿದರೂ ಅದನ್ನು ಕೇಳುವವರಿಲ್ಲ, ಮರು ಉತ್ತರ ಅದಕ್ಕೆ ಸಿಗುವುದೂ ಇಲ್ಲ. ಈ ಪ್ರತಿಮೆಯ ಕಾಮಗಾರಿಯ ವೆಚ್ಚ 20 ಕೋಟಿ ರೂಪಾಯಿಗೂ ಅಧಿಕವಾಗಿದೆ. ಇದರಿಂದ ಕರ್ನಾಟಕಕ್ಕೆ, ಕನ್ನಡಕ್ಕೆ ಎಷ್ಟರಮಟ್ಟಿಗೆ ಲಾಭವಾಯಿತು ಎನ್ನುವುದನ್ನು ಕಾಲವೇ ಹೇಳಬೇಕು. ಯಾಕೆಂದರೆ, ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಅಳಿದು ಈ ಪ್ರತಿಮೆ ಉಳಿದರೆ ಪ್ರತಿಮೆಗೆ ಯಾವ ಅರ್ಥವೂ ಇರುವುದಿಲ್ಲ. ಜನರನ್ನು ಭಾವನಾತ್ಮಕವಾಗಿ ಮರುಳು ಮಾಡುವುದಕ್ಕೆ ಬಳಕೆಯಾಗುವ ಇಂತಹ ಪ್ರತಿಮೆಗಳನ್ನು ಕೆಲವೊಮ್ಮೆ ದುಷ್ಕರ್ಮಿಗಳು ಸಮಾಜದ ಶಾಂತಿ, ನೆಮ್ಮದಿಯನ್ನು ಕೆಡಿಸುವುದಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಆಗಾಗ ಅಂಬೇಡ್ಕರ್, ಗಾಂಧೀಜಿ ಪ್ರತಿಮೆಗಳು ವಿರೂಪಗೊಳ್ಳುವುದು ಇದೇ ಕಾರಣಕ್ಕೆ. ಗಾಂಧಿ, ಅಂಬೇಡ್ಕರ್ ಚಿಂತನೆಗಳು ದಿನ ನಿತ್ಯ ವಿರೂಪಗೊಂಡರೂ ಅದರ ಬಗ್ಗೆ ಚಿಂತಿಸುವವರು ಯಾರೂ ಇಲ್ಲ. ಯಾಕೆಂದರೆ ಚಿಂತನೆಗಳಿಗೆ ಆಕಾರಗಳಿಲ್ಲ. ದಲಿತರ ಮೇಲೆ ಹಲ್ಲೆ, ದೇವಸ್ಥಾನಗಳಲ್ಲಿ ಅಸ್ಪಶ್ಯತೆ, ಸಂವಿಧಾನದ ಆಶಯಗಳನ್ನು ತಿರುಚುವುದು ಇವೆಲ್ಲವೂ ಅಂಬೇಡ್ಕರ್‌ರನ್ನು ವಿರೂಪಗೊಳಿಸಿದಂತೆಯೇ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದರೆ, ಈ ದೇಶದ ಸ್ಥಿತಿ ಹೀಗಿರುತ್ತಿರಲಿಲ್ಲ. ಆದರೆ ಅಂಬೇಡ್ಕರ್ ಪ್ರತಿಮೆಗೆ ಯಾರಾದರೂ ಅವಮಾನಿಸಿದಾಗಷ್ಟೇ ನಮ್ಮ ಅಂಬೇಡ್ಕರ್ ಪ್ರೀತಿ ಜಾಗೃತಗೊಳ್ಳುತ್ತದೆ. ಇದು ಆಳುವವರಿಗೂ ಚೆನ್ನಾಗಿ ಗೊತ್ತಿದೆ. ಆದುದರಿಂದಲೇ ಅವರು ಹಂತ ಹಂತವಾಗಿ ಅಂಬೇಡ್ಕರ್ ಚಿಂತನೆಗಳನ್ನು ನಾಶಗೊಳಿಸುತ್ತಾ,ಅಂಬೇಡ್ಕರ್ ಪ್ರತಿಮೆಗಳನ್ನು ನಿರ್ಮಿಸಿ ತಮ್ಮ ಅಂಬೇಡ್ಕರ್ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಕನ್ನಡವನ್ನು, ಕರ್ನಾಟಕವನ್ನು ಪ್ರತಿಮೆಗೆ ಸೀಮಿತಗೊಳಿಸಿದಾಗ ನಾಳೆ ಕನ್ನಡಕ್ಕೂ ಇದೇ ಅಪಾಯ ಎದುರಾಗಬಹುದು. ಕನ್ನಡವೆಂದರೆ ಈ ನಾಡಿನ ರೈತಾಪಿ ಜನರ ಬದುಕು. ಅವರನ್ನು ಮರೆತು ನಾವು ಕನ್ನಡದ ಪ್ರತಿಮೆ ಎಂದು ಘೋಷಿಸಿ ನಿರ್ಮಿಸುವ ಯಾವುದೇ ಮೂರ್ತಿ ಕನ್ನಡತನದ ಅಣಕವಾಗಿದೆ. ಕನ್ನಡದ ನೆಲ, ಜಲ ಕಲುಷಿತವಾಗುತ್ತಿರುವಾಗ, ಕನ್ನಡ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವಾಗ, ಕನ್ನಡದ ಪರವಾಗಿ ಧ್ವನಿಯೆತ್ತಿದ ಕನ್ನಡದ ಕಾರ್ಯಕರ್ತರು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವಾಗ, ಕನ್ನಡದ ಸೌಹಾರ್ದ ಮೌಲ್ಯಗಳನ್ನು ರಾಜಕಾರಣಿಗಳು ಆಹುತಿ ತೆಗೆದುಕೊಳ್ಳುತ್ತಿರುವಾಗ, ಕನ್ನಡಿಗರು ಕಟ್ಟಿ ಬೆಳೆಸಿದ ಬ್ಯಾಂಕುಗಳು ಉತ್ತರ ಭಾರತೀಯರ ಪಾಲಾಗುತ್ತಿರುವಾಗ, ಕನ್ನಡದ ಉದ್ಯಮಗಳಲ್ಲಿ ಹಿಂದಿ ಭಾಷಿಗರೇ ಹೆಚ್ಚುತ್ತಿರುವಾಗ, ಕನ್ನಡದ ಬಸವಣ್ಣ, ಟಿಪ್ಪು ಸುಲ್ತಾನ್‌ರಂತಹ ವ್ಯಕ್ತಿತ್ವಗಳನ್ನು ಕರ್ನಾಟಕದಲ್ಲಿ ಹುಟ್ಟಿದ ಪೂರ್ಣಯ್ಯ, ಮೀರ್ ಸಾದಿಕ್‌ಗಳೇ ಅವಮಾನಿಸುತ್ತಿರುವಾಗ, ಭ್ರಷ್ಟ ರಾಜಕಾರಣಿಗಳು ಗಣಿಗಾರಿಕೆಯ ಮೂಲಕ ಕರ್ನಾಟಕದ ಒಡಲನ್ನು ಬಗೆಯುತ್ತಿರುವಾಗ ಸರಕಾರ ಅದೆಷ್ಟು ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿಮೆಯನ್ನು ಸ್ಥಾಪಿಸಿದರೂ ಅದು ತಪ್ಪು ಅರ್ಥವನ್ನೇ ಕೊಡುತ್ತದೆ. ಇಂತಹ ಪ್ರತಿಮೆ ಜನರನ್ನು ಭಾವನಾತ್ಮಕವಾಗಿ ಮರುಳು ಮಾಡಬಹುದೇ ಹೊರತು, ವಾಸ್ತವದಲ್ಲಿ ಕನ್ನಡಕ್ಕೆ ಯಾವುದೇ ಕೊಡುಗೆಯನ್ನು ನೀಡಲಾರದು.
ಪ್ರತಿಮೆಯನ್ನು ಅನಾವರಣಗೊಳಿಸುತ್ತಾ, ಎಲ್ಲ ಕನ್ನಡ ಪರ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಈಗಾಗಲೇ ಕೋಮುದ್ವೇಷಗಳನ್ನು ಹರಡುತ್ತಾ, ನಾಡಿಗೆ ಹಲವು ಬಾರಿ ಬೆಂಕಿ ಹಚ್ಚಿದ ಸಂಘಪರಿವಾರದ ಕಾರ್ಯಕರ್ತರ ಮೇಲಿನ ನೂರಾರು ಪ್ರಕರಣಗಳನ್ನು ಸರಕಾರ ಹಿಂದೆಗೆದುಕೊಂಡಿದೆ. ಆದರೆ ಕನ್ನಡದ ಪರವಾಗಿ ಧ್ವನಿಯೆತ್ತಿದ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂದೆಗೆಯುವಾಗ ಮಾತ್ರ ಸರಕಾರ ಮೀನಾ ಮೇಷ ಎಣಿಸುತ್ತದೆ. ಇದೇ ರೀತಿಯಲ್ಲಿ ರೈತರ ಪರವಾಗಿ ಹೋರಾಟ ನಡೆಸಿದ ಹೋರಾಟಗಾರರ ಮೇಲೆಯೂ ನೂರಾರು ಪ್ರಕರಣಗಳಿವೆ. ಇವುಗಳನ್ನೂ ಹಿಂದೆಗೆಯುವ ಬಗ್ಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ, ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಯೋಜನೆಗಳನ್ನು ರೂಪಿಸಬೇಕು.
ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆಯಿದೆ ಎಂದಾದರೆ ಇಂಗ್ಲಿಷ್‌ನ ಜೊತೆಗಾದರೂ ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ಕೆಲಸ ನಡೆಯಬೇಕು. ಬೆಳಗಾವಿಯಂತಹ ಗಡಿ ಪ್ರದೇಶಗಳಲ್ಲಿ ಮರಾಠಿಗರು ಕನ್ನಡ ಧ್ವಜಕ್ಕೆ ಅವಮಾನಿಸಿದಾಗಷ್ಟೇ ‘ಬೆಳಗಾವಿ ನಮ್ಮದು’ ಘೋಷಣೆ ಕೂಗುವುದಲ್ಲ. ಬೆಳಗಾವಿಯಲ್ಲಿರುವ ಕನ್ನಡ ಮಾತೃಭಾಷಿಗರ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು. ಗಡಿಭಾಗದ ಕನ್ನಡಿಗರ ಬಗ್ಗೆ ಸಮೀಕ್ಷೆಯನ್ನು ನಡೆಸಿ, ಅಲ್ಲಿ ವರ್ಷದಿಂದ ವರ್ಷಕ್ಕೆ ಕನ್ನಡಿಗರ ಸಂಖ್ಯೆ ಯಾಕೆ ಇಳಿಮುಖವಾಗುತ್ತಿದೆ ಎನ್ನುವುದರ ಬಗ್ಗೆ ಅಧ್ಯಯನ ನಡೆಸಬೇಕು. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕನ್ನಡಿಗರನ್ನೇ ಕೇಂದ್ರವಾಗಿಟ್ಟುಕೊಂಡು ಒಂದು ಗಣತಿಯನ್ನು ನಡೆಸುವ ಅಗತ್ಯವಿದೆ. ಕನ್ನಡ ಮಾತೃಭಾಷಿಗರು, ಮನೆ ಭಾಷೆ ಬೇರೆಯಾಗಿದ್ದೂ ಕನ್ನಡದಲ್ಲಿ ವ್ಯವಹರಿಸುವ ಕನ್ನಡಿಗರನ್ನು ಗುರುತಿಸಿ ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯ ಬಗ್ಗೆ ವರದಿಯೊಂದನ್ನು ಸರಕಾರ ತರಿಸಿ, ಕನ್ನಡಿಗರ ಆಮೂಲಾಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಬೇಕು. ಕರ್ನಾಟಕದಲ್ಲಿ ಕನ್ನಡ ಯಾವ ಕಾರಣಕ್ಕೂ ಪ್ರತಿಮೆಗೆ ಸೀಮಿತವಾಗದಿರಲಿ. ನದಿ, ಪರಿಸರ ಎಲ್ಲವನ್ನೂ ದೇವರನ್ನಾಗಿಸಿ ಅವುಗಳನ್ನು ಮಲಿನಗೊಳಿಸಿ ಅಕ್ಷರಶಃ ನಾಶಗೊಳಿಸಿದ್ದೇವೆ. ಇದೀಗ ಆ ಸ್ಥಿತಿ ಕನ್ನಡಕ್ಕೂ ಬರದಿರಲಿ.







