ಕಣಚೂರು ವಿದ್ಯಾ ಸಂಸ್ಥೆಯಿಂದ ಮೀಫ್ ಗೆ 51 ಉಚಿತ ಸೀಟುಗಳು

ಮಂಗಳೂರು: ಮುಂದಿನ ಶೈಕ್ಷಣಿಕ ವರ್ಷ 2026-27ರಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ತೇರ್ಗಡೆಯಾಗುವ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಕಣಚೂರು ವಿದ್ಯಾ ಸಂಸ್ಥೆಯು ಒಂದು ಮೆಡಿಕಲ್ ಸೀಟು ಸಹಿತ ಒಟ್ಟು 51 ಉಚಿತ ಸೀಟುಗಳನ್ನು ಹಾಸ್ಟೆಲ್ ಸೌಲಭ್ಯ ಸಹಿತವಾಗಿ ಮೀಫ್ ಸಂಸ್ಥೆಗೆ ನೀಡುವುದಾಗಿ ವಾಗ್ದಾನ ಮಾಡಿದೆ.
ಕಣಚೂರು ಮೆಡಿಕಲ್ ಕಾಲೇಜಿನ ದಶಮಾನೋತ್ಸವದ ಅಂಗವಾಗಿ ಆರಂಭವಾಗಲಿರುವ ಕಣಚೂರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಪ್ರವೇಶಕ್ಕಾಗಿ MIEFನಲ್ಲಿ ನೋಂದಾಯಿಸಿದ ಶಾಲೆಗಳು ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 51 ಉಚಿತ ಸೀಟುಗಳನ್ನು ಕಣಚೂರು ಸಂಸ್ಥೆಯ ಸ್ಥಾಪಕರಾದ ಡಾ. ಯು.ಕೆ. ಮೋನು ಹಾಜಿ ಘೋಷಿಸಿದ್ದಾರೆ.
ಎಸೆಸೆಲ್ಸಿ ನಂತರ NEET, JEE, CET ಇಂಟಿಗ್ರೇಟೆಡ್ ಪಿಯುಸಿಗೆ PCMB, PCMC ವಿಭಾಗಗಳಲ್ಲಿ 40 ಸೀಟುಗಳು, ದ್ವಿತೀಯ ಪಿಯುಸಿ ನಂತರ NEET ಲಾಂಗ್ ಟರ್ಮ್ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ 10 ಸೀಟುಗಳನ್ನು ಕಣಚೂರು ಸಂಸ್ಥೆ MIEF ಮೂಲಕ ಉಚಿತವಾಗಿ ನೀಡಲಿದೆ. ಬೌದ್ಧಿಕ ಸಾಮರ್ಥ್ಯ, ಆರ್ಥಿಕ ಹಿನ್ನೆಲೆ ಮತ್ತು ಕೌನ್ಸಿಲಿಂಗ್ ಮಾನದಂಡಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆಯನ್ನು ಮೀಫ್ ಸಂಸ್ಥೆ ನಡೆಸಲಿದೆ.
ಭಾರತದ ಖ್ಯಾತ ತರಬೇತುದಾರರಿಂದ ತರಬೇತಿ, ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕ ಕ್ಲಾಸ್ ರೂಂಗಳು, ಪ್ರತ್ಯೇಕ ಹಾಸ್ಟೆಲ್ ಕ್ಯಾಂಪಸ್ ಸೇರಿದಂತೆ ಸೌಲಭ್ಯಪೂರ್ಣ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಇದಾಗಿದ್ದು, MIEFನಲ್ಲಿ ನೋಂದಾಯಿಸಿದ ಶಾಲೆಗಳು ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ವಿವರಗಳು ಈ ಕೆಳಗಿನಂತಿವೆ:
ವರ್ಗ - 1: NEET ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 5000 ರ‍್ಯಾಂಕ್ ಒಳಗೆ ಬಂದಿರುವ ಒಬ್ಬ ವಿದ್ಯಾರ್ಥಿಗೆ ಹಾಸ್ಟೆಲ್ ಸಹಿತ ಉಚಿತ ಮೆಡಿಕಲ್ (MBBS) ಸೀಟು.
ವರ್ಗ - 2: ಎಸ್ಎಸ್ಎಲ್ಸಿಯಲ್ಲಿ 97% ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಹಾಸ್ಟೆಲ್ ಸಹಿತ 10 ಪಿಯುಸಿ ಸೀಟುಗಳು.
ವರ್ಗ - 3: ಎಸ್ಎಸ್ಎಲ್ಸಿಯಲ್ಲಿ ಕನಿಷ್ಠ 50% ಅಂಕಗಳು ಹಾಗೂ ಗಣಿತ ಅಥವಾ ವಿಜ್ಞಾನ ವಿಷಯಗಳಲ್ಲಿ 95% ಕ್ಕಿಂತ ಹೆಚ್ಚು ಅಂಕ ಪಡೆದ ಗ್ರಾಮೀಣ ಪ್ರದೇಶ, ಕನ್ನಡ ಮಾಧ್ಯಮ, ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾಥ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಹಿತ 10 ಪಿಯುಸಿ ಸೀಟುಗಳು.
ವರ್ಗ - 4: ಎಸ್ಎಸ್ಎಲ್ಸಿಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಹಿತ 20 ಪಿಯುಸಿ ಸೀಟುಗಳು.
ವರ್ಗ - 5: ಪಿಯುಸಿಯಲ್ಲಿ 95% ಕ್ಕಿಂತ ಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಹಿತ NEET ದೀರ್ಘಾವಧಿ ತರಬೇತಿ.
ವರ್ಗ - 6: ಪಿಯುಸಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ 95% ಕ್ಕಿಂತ ಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಹಿತ NEET ದೀರ್ಘಾವಧಿ ತರಬೇತಿ.
ಎಸ್ಎಸ್ಎಲ್ಸಿ, ಪಿಯುಸಿ ಮತ್ತು NEET ಫಲಿತಾಂಶ ಪ್ರಕಟಗೊಂಡ ತಕ್ಷಣ ಅರ್ಜಿಗಳನ್ನು ಮೀಫ್ ಕಚೇರಿಯಲ್ಲಿ ಸ್ವೀಕರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೀಫ್ ಕಚೇರಿಯ ಮೊಬೈಲ್ ಸಂಖ್ಯೆ 8792115666 ಅಥವಾ 8431990966 ಗೆ ಸಂಪರ್ಕಿಸಬಹುದು ಎಂದು ಮೀಫ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






