ಕಲಾ ಸಾಧಕರಿಗೆ ಮಿತ್ರ ಯಕ್ಷಗಾನ ಮಂಡಳಿ ಪ್ರಶಸ್ತಿ ಪ್ರದಾನ

ಉಡುಪಿ, ಜು.೨: ಕರಾವಳಿಯ ಜಾನಪದ ಕಲೆಯಾಗಿರುವ ಯಕ್ಷಗಾನ ಕಲೆ ಅವಿದ್ಯಾವಂತರಿಗೂ ನೈತಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸುಸಂಸ್ಕೃತರನ್ನಾಗಿಸಿದೆ ಎಂದು ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥರು ಹೇಳಿದ್ದಾರೆ.
ಪರ್ಯಾಯ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಕಾರದಲ್ಲಿ ಸರಳಬೆಟ್ಟು ಶ್ರೀಮಿತ್ರ ಯಕ್ಷಗಾನ ಮಂಡಳಿ, ಶ್ರೀ ಮಿತ್ರ ಕಲಾನಿಕೇತನ ಟ್ರಸ್ಟ್, ಶ್ರೀ ಯಕ್ಷಮಿತ್ರ ಯಕ್ಷಗಾನ ತರಬೇತಿ ಕೇಂದ್ರ, ಪರ್ಕಳ ವಿಟ್ಲ ಜೋಶಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಪ್ರಶಸ್ತಿ ಪ್ರದಾನ ಮತ್ತು ೪೦ನೇ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಪುರಾಣದ ನೀತಿ ಕಥೆಗಳು ಜನರಲ್ಲಿ ನೈತಿಕತೆಯನ್ನು ಬೆಳೆಸಿ ಸಮಾಜದಲ್ಲಿ ಶಾಂತಿ, ನೆಮ್ಮದಿಯನ್ನು ನೆಲೆಗೊಳಿಸುವ ಸಾಮರ್ಥ್ಯ ಹೊಂದಿವೆ. ಯಕ್ಷಗಾನದಲ್ಲಿ ಸಂಗೀತ, ನಾಟ್ಯ, ಹಾಡುಗಾರಿಕೆ ಮೊದಲಾದ ನವರಸಗಳು ತುಂಬಿವೆ. ಇದು ಎಲ್ಲಾ ಬಗೆಯ ಅಭಿರುಚಿಯುಳ್ಳ ಪ್ರೇಕ್ಷಕರನ್ನು ತಣಿಸಬಲ್ಲದು. ಇಂದು ಯಕ್ಷಗಾನಕ್ಕೆ ರಾಜಾಶ್ರಯವಿಲ್ಲ ಹಾಗಾಗಿ ಪ್ರೇಕ್ಷಕನೇ ಇಲ್ಲಿ ರಾಜನಾಗಿ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದರು.
ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಹಾಗೂ ಸಂಸ್ಥೆಯ ಗೌರವಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಕಳೆದ ೪೦ ವರ್ಷಗಳಿಂದ ಕಲಾ ಸೇವೆಯನ್ನು ಗೈಯುತ್ತಿರುವ ಮಿತ್ರ ಯಕ್ಷಗಾನ ಮಂಡಳಿಯ ಕಲಾರಾಧನೆ ಮಾದರಿಯಾಗಿದೆ. ಕಲಾರಾಧಕರ ಪ್ರೋತ್ಸಾಹದಿಂದ ಮಾತ್ರ ಇದು ಸಾಧ್ಯವಾಗು ತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಕಲಾ ಸಾಧಕರುಗಳಾದ ರಾಮಕೃಷ್ಣ ಭಟ್ ಯಲ್ಲಾಪುರ, ಕೆ.ಎಸ್.ಮಂಜುನಾಥ ಹರಿಹರ, ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ಸುಧೀರ್ ರಾಜ್ ಕೆ.ನಿಟ್ಟೆ, ಬಗ್ವಾಡಿ ಕೃಷ್ಣಮೂರ್ತಿ ಭಟ್ ಇಂದ್ರಾಳಿ, ನಿರ್ಮಲಾ ವಾಸುದೇವ ಪೈ ಗುಂಡಿಬೈಲು, ಲಲಿತಾ ಸತೀಶ್ ಎನ್. ಮಣಿಪಾಲ, ವಿದುಷಿ ಪಾವನಾ ಬಿ.ಆಚಾರ್ ಮಣಿಪಾಲ, ಈಶ್ವರ ಮಣಿಪಾಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಾ ವಿಮರ್ಶಕ ಪ್ರೊ.ಎಸ್.ವಿ.ಉದಯ ಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ, ಕಲಾಭಿಮಾನಿ ನರಹರಿ ಬಿ., ವಿಟ್ಲಜೋಶಿ ಪ್ರತಿಷ್ಠಾನದ ಡಾ.ಹರೀಶ್ ಜೋಶಿ, ಮಂಡಳಿಯ ಸ್ಥಾಪಕಾಧ್ಯಕ್ಷ ಉಪೇಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಬಿ., ಎಸ್.ಅನಂತ ನಾಯ್ಕ್, ಶಂಕರ ನಾಯ್ಕ್ ಮೊದಲಾದವರು ಉಪಸ್ಥಿತರಿರುವರು.
ಮಂಡಳಿಯ ಅಧ್ಯಕ್ಷ ಎಚ್.ಪ್ರಕಾಶ ಶಾನುಭಾಗ್ ಮಾತನಾಡಿದರು. ನಂತರ ಬಾಲಕಲಾವಿದರಿಂದ ಯಕ್ಷಗಾನ ವೀರಮಣಿ ಕಾಳಗ ಪ್ರದರ್ಶನಗೊಂಡಿತು







