100 ದಿನಗಳಿಂದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮೌನವಾಗಿದ್ದಾರೆ : ಕಾಂಗ್ರೆಸ್

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ (Photo credit: PTI)
ಹೊಸದಿಲ್ಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ನೀಡಿದ ನಂತರ 100 ದಿನಗಳಿಂದ ಸಂಪೂರ್ಣವಾಗಿ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಅವರು ಹಿಂದಿನ ಎಲ್ಲಾ ಉಪರಾಷ್ಟ್ರಪತಿಗಳಂತೆ ಕನಿಷ್ಠ ವಿದಾಯ ಸಮಾರಂಭಕ್ಕೆ ಅರ್ಹರು ಎಂದು ಹೇಳಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಭಾರತದ ರಾಜಕೀಯ ಇತಿಹಾಸದಲ್ಲಿ ಅಪರೂಪದ ಘಟನೆ ನಡೆದು ನಿಖರವಾಗಿ 100 ದಿನಗಳು ಕಳೆದಿವೆ. ಜುಲೈ 21ರ ತಡರಾತ್ರಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದರು. ಅವರು ಪ್ರಧಾನಿ ಬಗ್ಗೆ ಯಾವಾಗಲೂ ಹೊಗಳಿಕೆ ಮಾತುಗಳನ್ನಾಡುತ್ತಿದ್ದರೂ ಅವರನ್ನು ರಾಜೀನಾಮೆ ನೀಡುವಂತೆ ಬಲವಂತ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಪ್ರತಿದಿನ ಸುದ್ದಿಯಲ್ಲಿರುತ್ತಿದ್ದ ಜಗದೀಪ್ ಧನಕರ್ ಕಳೆದ 100 ದಿನಗಳಿಂದ ಸಂಪೂರ್ಣವಾಗಿ ಮೌನವಾಗಿದ್ದಾರೆ. ರಾಜ್ಯಸಭೆಯ ಸ್ಪೀಕರ್ ಆಗಿ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರೋಧ ಪಕ್ಷದವರ ಸ್ನೇಹಿತರಾಗಿರಲಿಲ್ಲ. ಅವರು ವಿರೋಧ ಪಕ್ಷದ ಮೇಲೆ ಅನ್ಯಾಯವಾಗಿ ಒತ್ತಡ ಹೇರುತ್ತಿದ್ದರು. ಆದರೂ, ಪ್ರಜಾಪ್ರಭುತ್ವದ ಸಂಪ್ರದಾಯಗಳಿಗೆ ಅನುಗುಣವಾಗಿ, ಅವರು ಹಿಂದಿನ ಎಲ್ಲಾ ಸ್ಪೀಕರ್ಗಳಂತೆ ಕನಿಷ್ಠ ವಿದಾಯ ಸಮಾರಂಭಕ್ಕಾದರೂ ಅರ್ಹರು. ಆದರೆ ಅದು ಇಂದಿಗೂ ನಡೆದಿಲ್ಲ ಎಂದು ಜೈರಾಮ್ ರಮೇಶ್ ಹೇಳಿದರು.







