ಹವಾಮಾನ ಬದಲಾವಣೆ, ಎಲ್‌ನಿನೋ ತೆಂಗು ಕ್ಷೇತ್ರಕ್ಕೆ ಸವಾಲು: ಸಿಪಿಸಿಆರ್‌ಐ ನಿರ್ದೇಶಕ
ವಿಶ್ವ ತೆಂಗು ದಿನಾಚರಣೆಯಲ್ಲಿ SHITIJ 2.0 ಉದ್ಯಮಶೀಲತಾ ಕಾರ್ಯಕ್ರಮಕ್ಕೆ ಚಾಲನೆ

ಕಾಸರಗೋಡು: ಹವಾಮಾನ ಬದಲಾವಣೆ ಹಾಗೂ ಎಲ್‌ನಿನೋ ಪರಿಣಾಮಗಳು ತೆಂಗು ಸೇರಿದಂತೆ ತೋಟಗಾರಿಕಾ ಬೆಳೆ ಕ್ಷೇತ್ರಕ್ಕೆ ಗಂಭೀರ ಸವಾಲುಗಳನ್ನು ಒಡ್ಡುತ್ತಿದ್ದು, ರೈತರ ಕೃಷಿಯನ್ನು ಹೆಚ್ಚು ಸ್ಥಿತಿಸ್ಥಾಪಕ ಗೊಳಿಸಲು ಸಂಶೋಧನೆ, ತಾಂತ್ರಿಕ ಆವಿಷ್ಕಾರ ಹಾಗೂ ವಿವಿಧ ಸಂಸ್ಥೆಗಳ ಸಹಯೋಗ ಅಗತ್ಯವಾಗಿದೆ ಎಂದು ಐಸಿಎಆರ್–ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ), ಕಾಸರಗೋಡು ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್ ಹೇಳಿದರು.
ಕಾಸರಗೋಡಿನ ಸಿಪಿಸಿಆರ್‌ಐನಲ್ಲಿ ಬುಧವಾರ ನಡೆದ ವಿಶ್ವ ತೆಂಗು ದಿನಾಚರಣೆ–2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅನಿಶ್ಚಿತತೆಯ ಕಾಲದಲ್ಲಿ ತೆಂಗು: ಆಹಾರ, ಇಂಧನ ಮತ್ತು ಜೀವನೋಪಾಯದ ಭದ್ರತೆ” ಎಂಬ ಈ ವರ್ಷದ ಘೋಷವಾಕ್ಯದ ಹಿನ್ನೆಲೆಯಲ್ಲಿ ತೆಂಗು ಕ್ಷೇತ್ರ ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ SHITIJ 2.0 ಆನ್‌ಲೈನ್ ಉದ್ಯಮಶೀಲತಾ ಅಭಿವೃದ್ಧಿ ಹಾಗೂ ಪೂರ್ವ-ಇನ್‌ಕ್ಯುಬೇಶನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉದ್ಯಮಶೀಲರು, ಸ್ಟಾರ್ಟ್‌ಅಪ್‌ಗಳು ಹಾಗೂ ಹೊಸ ಆವಿಷ್ಕಾರಕರಿಗೆ ತಮ್ಮ ಆಲೋಚನೆ ಮತ್ತು ತಂತ್ರಜ್ಞಾನಗಳನ್ನು ವಾಣಿಜ್ಯಿಕ ಉತ್ಪನ್ನಗಳು ಹಾಗೂ ಉದ್ಯಮ ಗಳಾಗಿ ರೂಪಿಸಲು ಈ ಕಾರ್ಯಕ್ರಮ ನೆರವಾಗಲಿದೆ. ಇದೇ ಸಂದರ್ಭದಲ್ಲಿ ‘ತೋಟಗಾರಿಕಾ ಬೆಳೆಗಳಲ್ಲಿ ತೀವ್ರ ಹವಾಮಾನ ವೈಪರೀತ್ಯ ನಿರ್ವಹಣೆ’ ಕುರಿತ ಪಾಲುದಾರರ ಸಭೆಯೂ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಹೆಬ್ಬಾರ್, ಹವಾಮಾನ ಬದಲಾವಣೆಯಿಂದ ತೋಟಗಾರಿಕಾ ಬೆಳೆಗಳಲ್ಲಿ ಹೊಸ ಸವಾಲುಗಳು ಎದುರಾಗುತ್ತಿದ್ದು, ಕೀಟ ಹಾಗೂ ರೋಗಗಳ ಸಮಸ್ಯೆಗಳು ದ್ವಿತೀಯ ಹಂತದ ಸವಾಲು ಗಳಾಗಿ ಕಾಣಿಸಿಕೊಳ್ಳುತ್ತಿವೆ ಎಂದರು. ಸುಧಾರಿತ ತಳಿಗಳು ಹಾಗೂ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಸಿಪಿಸಿಆರ್‌ಐ ಕೈಗೊಂಡಿರುವ ಕಾರ್ಯಗಳನ್ನು ವಿವರಿಸಿದ ಅವರು, ಗುಣಮಟ್ಟದ ನೆಡುವ ಸಾಮಗ್ರಿಗೆ ಇರುವ ಬೇಡಿಕೆಯನ್ನು ಪೂರೈಸಲು ನರ್ಸರಿ ಉದ್ಯಮಿಗಳಿಗೆ ತಳಿಗಳ ಪರವಾನಗಿ ನೀಡಲಾಗುತ್ತಿದೆ ಎಂದರು.
ಎಲ್‌ನಿನೋ ಸೇರಿದಂತೆ ಹವಾಮಾನ ವೈಪರೀತ್ಯಗಳು ತೋಟಗಾರಿಕಾ ಬೆಳೆಗಳ ಮೇಲೆ ಬೀರುವ ಪರಿಣಾಮ ಗಳನ್ನು ಅಧ್ಯಯನ ಮಾಡುವುದರ ಜೊತೆಗೆ, ಐಸಿಎಆರ್‌ನ ವಿವಿಧ ಸಂಸ್ಥೆಗಳು ಹಾಗೂ ಇತರ ಸಂಘಟನೆ ಗಳೊಂದಿಗೆ ಸಹಯೋಗ ಅಗತ್ಯವಿದೆ ಎಂದು ಅವರು ಹೇಳಿದರು.
ಕೃಷಿ ಸ್ಟಾರ್ಟ್‌ಅಪ್‌ಗಳಿಗೆ SHITIJ 2.0 ಉತ್ತೇಜನ
ಸಿಪಿಸಿಆರ್‌ಐ ಸಾಮಾಜಿಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೆ. ಪೊನ್ನೂಸಾಮಿ ಅವರು SHITIJ 2.0 ಕಾರ್ಯಕ್ರಮವನ್ನು ಪರಿಚಯಿಸಿದರು. ಈಗಾಗಲೇ ಸುಮಾರು 400 ಮಂದಿ ಕಾರ್ಯಕ್ರಮಕ್ಕೆ ನೋಂದಾಯಿಸಿ ಕೊಂಡಿದ್ದು, ತರಕಾರಿ ಮತ್ತು ಹಣ್ಣುಗಳ ಮೌಲ್ಯ ಸರಪಳಿಯಲ್ಲಿ ಕಾರ್ಯನಿರ್ವಹಿಸುವ ಆರು ಸಹಭಾಗಿ ಸಂಸ್ಥೆ ಗಳೊಂದಿಗೆ ಸಿಪಿಸಿಆರ್‌ಐ ಕೇಂದ್ರವನ್ನು ಸಂಪರ್ಕಿಸುವ ವ್ಯವಸ್ಥೆ ರೂಪಿಸಲಾಗಿದೆ.
SHITIJ 2.0ಗೆ ಕಾರ್ಯಯೋಜನೆ ರೂಪಿಸುವುದು ಹಾಗೂ ಏಳು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳಲ್ಲಿ ಕೃಷಿ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ನಿಟ್ಟೆ (ಡೀಮ್ಡ್ ವಿಶ್ವವಿದ್ಯಾಲಯ)ಯ ಮಾಜಿ ಉಪಕುಲಪತಿ ಹಾಗೂ ISR & CRL ಉಪಾಧ್ಯಕ್ಷ ಪ್ರೊ. ಡಾ. ಬಿ. ಸತೀಶ್ ಕುಮಾರ್ ಭಂಡಾರಿ ಅವರು ಆನ್‌ಲೈನ್ ಪೂರ್ವ-ಇನ್‌ಕ್ಯುಬೇಶನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಪಿಸಿಆರ್‌ಐನ ‘ಕಲ್ಪವೃಕ್ಷ’ ಉಪಕ್ರಮ ಹಾಗೂ ನೂತನ ತಂತ್ರಜ್ಞಾನಗಳನ್ನು ಶ್ಲಾಘಿಸಿದ ಅವರು, SHITIJ 2.0 ಆಲೋಚನೆಗಳನ್ನು ಆವಿಷ್ಕಾರ, ಉತ್ಪನ್ನ ಹಾಗೂ ಉದ್ಯಮಗಳಾಗಿ ಪರಿವರ್ತಿಸುವ ವೇದಿಕೆಯಾಗಿದೆ ಎಂದರು.
ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ಮೂಲಕ ಆದಾಯ ಹೆಚ್ಚಿಸುವ ಅವಕಾಶಗಳಿದ್ದು, ಕೃಷಿ ಆಧಾರಿತ ಉದ್ಯಮಗಳ ಯಶಸ್ಸಿಗೆ ಸಹಯೋಗ ಪ್ರಮುಖವಾಗಿದೆ ಎಂದು ಅವರು ಹೇಳಿದರು.
ಉತ್ತಮ ರೈತರು, ಉದ್ಯಮಿಗಳಿಗೆ ಗೌರವ
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿ ರಾಜ್ಯದಿಂದ ಇಬ್ಬರು ಸಾಧಕ ರೈತರನ್ನು ಸನ್ಮಾನಿಸಲಾಯಿತು. ತಮಿಳುನಾಡಿನ ಜೆ. ಕೆನಡಿ ಮತ್ತು ಎಸ್. ಮುಹಮ್ಮದ್ ಇಸ್ಮಾಯಿಲ್, ಕರ್ನಾಟಕದ ರುದ್ರೇಶ್ ಎಚ್.ಎ. ಮತ್ತು ಪಿ.ಎನ್. ನಟರಾಜು, ಕೇರಳದ ಹರೀ ವರಧರಾಜ್ ಜಿ. ಮತ್ತು ಕದೀಜಾ ಕಾದರ್ ಪಿ., ಆಂಧ್ರಪ್ರದೇಶದ ಯೆರಗುಂಡಿ ಲಕ್ಷ್ಮಯ್ಯ ಮತ್ತು ಬಾಬುರಾಜ್ ಅವರನ್ನು ಗೌರವಿಸಲಾಯಿತು.
ಕಾಸರಗೋಡಿನ ಶ್ರೀಮತಿ ಶ್ರೀಲತಾ ಟಿ.ಕೆ. ಹಾಗೂ ಮಲಪ್ಪುರಂನ ಅಬ್ದುಲ್ ಗಫೂರ್ ಅವರನ್ನು ಯಶಸ್ವಿ ಉದ್ಯಮಿಗಳಾಗಿ ಸನ್ಮಾನಿಸಲಾಯಿತು.
ತಂತ್ರಜ್ಞಾನ ವಾಣಿಜ್ಯೀಕರಣಕ್ಕೆ ಒಡಂಬಡಿಕೆ
ತೆಂಗಿನ ಕಚ್ಚಾ ವಸ್ತುಗಳಿಂದ ತಯಾರಿಸುವ ವರ್ಜಿನ್ ತೆಂಗಿನೆಣ್ಣೆ, ತೆಂಗಿನ ಚಿಪ್ಸ್, ಸುವಾಸನೆಯ ತೆಂಗಿನ ಹಾಲು, ಫೋಮ್-ಮ್ಯಾಟ್ ಡ್ರೈಡ್ ತೆಂಗಿನ ಹಾಲು ಹಾಗೂ ವಿವಿಧ ತೆಂಗಿನ ತಳಿಗಳಿಗೆ ಸಂಬಂಧಿಸಿದ ತಂತ್ರಜ್ಞಾನಗಳ ವಾಣಿಜ್ಯೀಕರಣಕ್ಕಾಗಿ ಸಿಪಿಸಿಆರ್‌ಐ ಕೈಗಾರಿಕಾ ಮತ್ತು ಸಂಸ್ಥೆಗಳ ಸಹಭಾಗಿಗಳೊಂದಿಗೆ ಒಡಂಬಡಿಕೆಗಳಿಗೆ ಸಹಿ ಹಾಕಿತು.
ಸಿಎಂಆರ್ ಉತ್ಪನ್ನಗಳ ಆಧಾರದ ‘ಕಲ್ಪಾ ಕಾಂಪೋಸಿಟ್ ಫ್ಲೋರ್’ ಉತ್ಪನ್ನವನ್ನೂ ಬಿಡುಗಡೆ ಮಾಡಲಾಯಿತು. ಕೋಕೋಗೆ ಸಂಬಂಧಿಸಿದ ಉತ್ತಮ ತೋಟಗಾರಿಕಾ ಪದ್ಧತಿಗಳ ಪುಸ್ತಕ, ISPC ಸುದ್ದಿಪತ್ರಿಕೆ, ಸಮತೋಲಿತ ಪೋಷಕಾಂಶ ನಿರ್ವಹಣೆ ಕುರಿತ ಕರಪತ್ರ ಹಾಗೂ ಅಡಿಕೆ ಬೆಳೆಯ ಬಿಳಿ ಹುಳು ನಿಯಂತ್ರಣಕ್ಕೆ ಸಂಬಂಧಿಸಿದ ಕನ್ನಡ ವಿಸ್ತರಣಾ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.
ಸಿಪಿಸಿಆರ್‌ಐ ಪರವಾನಗಿದಾರರಾದ ಕರ್ನಾಟಕದ ಅಭಿಜ್ಞಾನ ಫುಡ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ರಾಧಾಕೃಷ್ಣ ಅವರು ‘NITYA’ ಎಂಬ ಹೊಸ ಬ್ರ್ಯಾಂಡ್‌ನ್ನು ಬಿಡುಗಡೆ ಮಾಡಿದರು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಗಳಡಿ ಫಲಾನುಭವಿಗಳಿಗೆ ತೆಂಗಿನ ಮರ ಏರುವ ಸಾಧನಗಳನ್ನೂ ವಿತರಿಸಲಾಯಿತು.
ಐಸಿಎಆರ್–ಡಿಸಿಆರ್ ನಿರ್ದೇಶಕ ಡಾ. ಜೆ. ದಿನಕರ ಅಡಿಗ ಅವರು ಮಾತನಾಡಿ, 110 ವರ್ಷಗಳ ತೆಂಗು ಸಂಶೋಧನಾ ಪರಂಪರೆ ಹೊಂದಿರುವ ಸಂಸ್ಥೆಯಲ್ಲಿ ವಿಶ್ವ ತೆಂಗು ದಿನಾಚರಣೆ ಆಯೋಜಿಸಿರುವ ಸಿಪಿಸಿಆರ್‌ಐಯನ್ನು ಅಭಿನಂದಿಸಿದರು.
ಬೆಳೆ ಸುಧಾರಣಾ ವಿಭಾಗದ ಮುಖ್ಯಸ್ಥ ಡಾ. ವಿ. ನಿರಾಲ್ ಸ್ವಾಗತಿಸಿದರು. ಡಾ. ಕೆ. ಪೊನ್ನೂಸಾಮಿ ವಂದಿಸಿದರು.
ತೋಟಗಾರಿಕಾ ಬೆಳೆಗಳಲ್ಲಿ ತೀವ್ರ ಹವಾಮಾನ ವೈಪರೀತ್ಯ ನಿರ್ವಹಣೆ ಕುರಿತ ಪಾಲುದಾರರ ಸಭೆಯನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಡಾ. ಎಸ್. ಸೆಂಥಿಲ್ ವಿನಾಯಕಂ ಉದ್ಘಾಟಿಸಿದರು. ತೋಟಗಾರಿಕಾ ಬೆಳೆಗಳನ್ನು ತೀವ್ರ ಹವಾಮಾನ ವೈಪರೀತ್ಯಗಳಿಂದ ರಕ್ಷಿಸುವ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಸೆಪ್ಟೆಂಬರ್ 3ರವರೆಗೆ ಅಧಿವೇಶನಗಳು ಮುಂದುವರಿಯಲಿವೆ.






