ಸೆ.25ರವರೆಗೆ ಉತ್ತರ ಕೇರಳದಲ್ಲಿ ಪ್ರಬಲ ಗಾಳಿ ಸಹಿತ ಭಾರೀ ಮಳೆ ಸಾಧ್ಯತೆ: ವಿಪತ್ತು ನಿರ್ವಹಣಾ ಪ್ರಾಧಿಕಾರ

ಕಾಸರಗೋಡು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಉತ್ತರ ಕೇರಳದಲ್ಲಿ ಸೆ.24ರ ಸಂಜೆಯಿಂದ ಸೆ.25ರ ಹಗಲಿನ ಅವಧಿಯವರೆಗೆ ಪ್ರಬಲ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಯುವ ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಮಣ್ಣು ತೆಗೆಯುವುದು ಸೇರಿದಂತೆ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳನ್ನು ತಕ್ಷಣವೇ ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಮಲೆನಾಡು ಹಾಗೂ ಗುಡ್ಡಗಾಡು ರಸ್ತೆಗಳಲ್ಲಿ ತುರ್ತು ಅಗತ್ಯವಿಲ್ಲದ ಪ್ರಯಾಣವನ್ನು ಸಾರ್ವಜನಿಕರು ಸಂಪೂರ್ಣ ವಾಗಿ ತಡೆಗಟ್ಟಬೇಕು ಎಂದು ಅವರು ವಿನಂತಿಸಿದ್ದಾರೆ.ಭೂಕುಸಿತದ ಅಪಾಯವಿರುವ ರಸ್ತೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರಕ್ಕೆ ನಿಯಂತ್ರಣ ಹೇರಲಾಗುವುದು. ಪರಿಸ್ಥಿತಿಯನ್ನು ಎದುರಿಸಲು ಜಿಲ್ಲೆಯ ಎಲ್ಲಾ ತಾಲೂಕು ತುರ್ತು ಕಾರ್ಯಾಚರಣೆ ಕೇಂದ್ರಗಳು ಸಂಪೂರ್ಣವಾಗಿ ಸಜ್ಜುಗೊಂಡಿವೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಕಂಟ್ರೋಲ್ ರೂಮ್‌ಗಳನ್ನು ಸಂಪರ್ಕಿಸಬೇಕು ಹಾಗೂ ಅನಿವಾರ್ಯವಾದರೆ ಸುರಕ್ಷಿತ ಕೇಂದ್ರ ಗಳಿಗೆ ಅಥವಾ ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಿರಬೇಕು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.






